ಹೈದರಾಬಾದ: 8 ಲಕ್ಷ ರೂಪಾರಿ ನೀಡಿ ಏಕೈಕ ಪುತ್ರನನ್ನು ದಂಪತಿ ಹತ್ಯೆಗೈದ ಘಟನೆ ಆಂಧ್ರಪ್ರದೇಶದ ಕಮ್ಮಂನಲ್ಲಿ ನಡೆದಿದೆ.
26 ವರ್ಷದ ಸಾಯಿರಾಮ್ ಮೃತಪಟ್ಟ ಯುವಕ. ಸರ್ಕಾರಿ ಶಾಲೆಯ ನಿವೃತ್ತ ಪ್ರಾಂಶುಪಾಲ ಕ್ಷತ್ರಿಯ ರಾಮ್ ಸಿಂಗ್ ಮತ್ತು ಅವರ ಪತ್ನಿ ರಾಣಿಬಾಯಿ ಸೇರಿ ಹಂತಕರಿಂದ ಕೊಲೆ ಮಾಡಿಸಿದ್ದಾರೆ. ಅ. 18ರಂದು ಸೂರ್ಯಪೇಟ್ ನಲ್ಲಿ ಸಾಯಿರಾಮ್ ಮೃತದೇಹ ಕಂಡು ಬಂದಿತ್ತು.
ಪೋಷಕರು ಪುತ್ರ ಕಾಣೆಯಾಗಿರುವುದಾಗಿ ನಾಟಕ ಮಾಡಿದ್ದರು. ಪುತ್ರನ ಹತ್ಯೆಗೆ ರಾಮ್ ಸಿಂಗ್ ತಮ್ಮ ಕಾರನ್ನೇ ಹಂತಕರಿಗೆ ನೀಡಿದ್ದು ಅದರಲ್ಲಿಯೇ ಶವ ಸಾಗಿಸಲಾಗಿತ್ತು. ಅ. 25 ರಂದು ಶವಾಗಾರದಲ್ಲಿದ್ದ ಪುತ್ರನ ಮೃತ ದೇಹ ನೋಡಲು ಪೊಲೀಸರು ಕರೆಕಳಿಸಿದಾಗ ದಂಪತಿ ಹತ್ಯೆಗೆ ಬಳಸಿದ್ದ ಕಾರ್ ನಲ್ಲಿಯೇ ತೆರಳಿದ್ದರು.
ಸಿಸಿಟಿವಿ ದೃಶ್ಯದಲ್ಲಿ ಕಾರ್ ಸಂಚಾರ ಗಮನಿಸಿದ ತನಿಖಾ ತಂಡ ಸಾಯಿರಾಮ್ ಪೋಷಕರನ್ನು ವಿಚಾರಣೆಗೆ ಒಳಪಡಿಸಿದಾಗ ಹತ್ಯೆಯ ರಹಸ್ಯ ಬಯಲಾಗಿದೆ. ಸಾಯಿರಾಮ್ ಮದ್ಯವ್ಯಸನಿಯಾಗಿದ್ದು, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ನಿರುದ್ಯೋಗಿಯಾಗಿದ್ದ ಆತ ಕುಡಿದುಬಂದು ರಾತ್ರಿಯಿಡಿ ಪೋಷಕರನ್ನು ಥಳಿಸುತ್ತಿದ್ದ. ವ್ಯಸನಮುಕ್ತಿ ಕೇಂದ್ರಕ್ಕೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಸಂಬಂಧಿಕರ ಎದುರು ಅವಮಾನ ಸಹಿಸಲಾಗದೆ ಪುತ್ರನ ಹತ್ಯೆಗೆ ಸಂಚುರೂಪಿಸಿದ್ದಾರೆ.
ಸಾಯಿರಾಮ್ ಸೋದರಮಾವ ಸತ್ಯನಾರಾಯಣ ನೇತೃತ್ವದಲ್ಲಿ ಮಿರ್ಯಾಲಗುಡ ಮಂಡಲದಿಂದ ಬಾಡಿಗೆ ಹಂತಕರು ಬಂದು ಹಗ್ಗದಿಂದ ಕುತ್ತಿಗೆ ಬಿಗಿದು ಸಾಯಿರಾಮ್ ಕೊಲೆ ಮಾಡಿ ಕಾರ್ ನಲ್ಲಿ ಮೃತದೇಹ ಸಾಗಿಸಿದ್ದರು.