ಬೆಳಗಾವಿ : ಬಹುತೇಕ ಹೆಚ್ಚಿನವರು ಬೆಳಗಾವಿಯವರೇ ಸೇರಿ “ಮಮತಾ ಕ್ರಿಯೇಷನ್ಸ್ , ಬೆಳಗಾವಿ” ಬ್ಯಾನರ್ ಅಡಿ ನಿರ್ಮಿಸಿರುವ “ಪರ್ಯಾಯ” ಕನ್ನಡ ಚಲನಚಿತ್ರ ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯದಾದ್ಯಂತ ಸುಮಾರು 75 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಶನಿವಾರ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು. ಗ್ರಾಮವೊಂದರಲ್ಲಿನ ಓರ್ವ ಕುರುಡ, ಕಿವುಡ ಮತ್ತು ಮೂಕ ತಮ್ಮ ದೈಹಿಕ ವೈಕಲ್ಯತೆಯ ಮಧ್ಯೆ ಕೂಡ ಹೇಗೆ ಬದುಕು ಕಟ್ಟಿಕೊಳ್ಳುತ್ತಾರೆ ಎಂಬ ವಿಷಯದ ಮೇಲೆ ಚಿತ್ರ ನಿರ್ಮಾಣಗೊಂಡಿದೆ. ನೈಜ ಘಟನೆಯನ್ನು ಆಧರಿಸಿರುವ ಈ ಚಿತ್ರ ಇತರ ಸಂಪ್ರದಾಯಕ ಏಕತಾನತೆಯ ಚಿತ್ರಗಳಿಗಿಂದ ವಿಭಿನ್ನವಾಗಿದೆ. ಈ ಚಿತ್ರದಲ್ಲಿ ನಾಯಕಿ ಪಾತ್ರವಿಲ್ಲದಿರುವುದು ಮತ್ತೊಂದು ವಿಶೇಷವೆಂದು ಚಿತ್ರದ ನಿರ್ದೇಶಕ ರಮಾನಂದ ಮಿತ್ರ ತಿಳಿಸಿದರು.
ಚಿತ್ರದ ತಂಡ ಒಟ್ಟಾಗಿ ಕೆಲಸ ಮಾಡಿದ್ದರಿಂದ ಚಿತ್ರ ನಿರೀಕ್ಷೆಗೂ ಮೀರಿ ಚೆನ್ನಾಗಿ ಬಂದಿದೆ. ಪ್ರತಿದೃಶ್ಯ ಅರ್ಥಗರ್ಭಿತವಾಗಿದೆ. ಬೆಳಗಾವಿಯ ಪತ್ರಕರ್ತರಾಗಿರುವ ಮುರುಗೇಶ ಶಿವಪೂಜಿ ಮತ್ತು ಶಿವಾನಂದ ಚಿಕ್ಕಮಠ ಅವರು ಈ ಚಿತ್ರದ ಸಹ ನಿರ್ಮಾಪಕರು. ಶಿವಪೂಜಿ ಅವರೂ ಈ ಚಿತ್ರದ ಮೂವರು ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬರು. ಅವರು ಚಿತ್ರದಲ್ಲಿ ಕಿವುಡನಾಗಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿರುವ ಪ್ರಮುಖ ಪಾತ್ರಧಾರಿಗಳಾದ ಕುರುಡ, ಕಿವುಡ ಮತ್ತು ಮೂಕರಾಗಿ ಅಭಿನಯಿಸಿದವರು ತಮ್ಮ ಪಾತ್ರಗಳನ್ನು ಎಷ್ಟು ತನ್ಮಯತೆಯಿಂದ ನಿಭಾಯಿಸಿದ್ದಾರೆಂದರೆ, ಚಿತ್ರದ ಚಿತ್ರೀಕರಣ ನೋಡಲು ಬಂದವರು ಅವರು ನಿಜವಾಗಿಯೂ ವಿಕಲಾಂಗರಂತೆಯೇ ಭಾವಿಸಿಕೊಂಡಿದ್ದರು ಎಂದು ನಿರ್ದೇಶಕ ಮಿತ್ರ ತಿಳಿಸಿದರು. ಪಾತ್ರಧಾರಿಗಳಾದ ಕುರುಡ, ಕಿವುಡ ಮತ್ತು ಮೂಕರಾಗಿ ಅಭಿನಯಿಸಿದವರು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾರೆ ಎಂಬುದು ಚಿತ್ರದ ಮುಖ್ಯ ಉದ್ದೇಶ. ದೈಹಿಕ ವೈಕಲ್ಯತೆ ಶಾಪವಲ್ಲ, ಮಾನಸಿಕ ವೈಕಲ್ಯತೆ ಇರಕೂಡದು ಎಂದು ಈ ಚಿತ್ರ ಸಾರುತ್ತದೆ ಎಂದು ಹೇಳಿದರು.
ಸಹ ನಿರ್ಮಾಪಕ ಮುರುಗೇಶ ಶಿವಪೂಜಿ ಮಾತನಾಡಿ, ಚಿತ್ರದ ಬಹುತೇಕ ಭಾಗವನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಡಿ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ ಹಾಗು ಕೆಲ ದೃಶ್ಯಗಳನ್ನು ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.
ಚಿತ್ರದ ಕಥೆಗೆ ಪೂರಕವಾಗಿರುವುದರಿಂದ ಖಾನಾಪುರ ತಾಲೂಕಿನ ಗಡಿ ಗ್ರಾಮವಾದ ಚಿಗುಳೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಗ್ರಾಮಕ್ಕೆ ಯಾವುದೇ ಮೊಬೈಲ್ ನೆಟವರ್ಕ ಇಲ್ಲ. ಯಾರನ್ನೇಯಾಗಲಿ ಕರೆದುಕೊಂಡು ಬಂದು ಕೆಲಸ ಮಾಡಬೇಕಾಗಿತ್ತು ಎಂದು ಚಿತ್ರೀಕರಣದ ತಮ್ನ ಮತ್ತೊಂದು ಅನುಭವ ಹಂಚಿಕೊಂಡರು. ಶಿವಪೂಜಿ ನಿರ್ಮಿಸಿ, ನಟಿಸಿರುವ ಎಂಟನೇ ಚಿತ್ರ ಇದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ತಂಡದ ಸದಸ್ಯರು ಉಪಸ್ಥಿತರಿದ್ದರು.