ಬೀಜಿಂಗ, ೨೮- ಇಡೀ ವಿಶ್ವಕ್ಕೆ ಕೊರೊನಾ ಸೋಂಕನ್ನು ಹರಡಿದ ಚೀನಾದಲ್ಲಿ ಈಗ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಲಾಕಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ಕಡ್ಡಾಯ ಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದ್ದು, ಇದೆಲ್ಲದರ ವಿರುದ್ಧ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾನುವಾರ ಒಂದೇ ದಿನ 40,000ಕ್ಕೂ ಅಧಿಕ ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಹೀಗಾಗಿ ಸೋಂಕು ವ್ಯಾಪಕವಾಗಿರುವ ಪ್ರದೇಶಗಳಲ್ಲಿ ಜನ ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಲಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಹಸ್ರಾರು ಸಂಖ್ಯೆಯಲ್ಲಿ ಜನ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದಾರೆ.
ಹೀಗಾಗಿ ಸರ್ಕಾರ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದು, ಇದರಿಂದಾಗಿ ಸೋಂಕು ಮತ್ತಷ್ಟು ಹೆಚ್ಚಳವಾಗುವ ಆತಂಕ ಎದುರಾಗಿದೆ. ಕೆಲವೆಡೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಚೀನಾದಲ್ಲಿ ಈಗ ಕಾಣಿಸಿಕೊಂಡಿರುವ ಸೋಂಕು ಲಕ್ಷಣರಹಿತ ಪ್ರಕರಣಗಳಾಗಿದ್ದು, ಒಂದೊಮ್ಮೆ ಕೊರೊನಾದ ಹೊಸ ರೂಪಾಂತರ ವರದಿಯಾದಲ್ಲಿ ಚೀನಾದಿಂದ ಜಗತ್ತಿಗೆ ಮತ್ತೊಮ್ಮೆ ಕಂಟಕ ಬರುವ ಸಾಧ್ಯತೆ ಇದೆ.