ಬೆಳಗಾವಿ : ಬೆಳಗಿನ ಜಾವ ನಗರದಲ್ಲಿ ವಶಕ್ಕೆ ಪಡೆದಿದ್ದ ಏಳು ಮಂದಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.
ವಶಕ್ಕೆ ಪಡೆದವರ ವಿಚಾರಣೆಯ ನಂತರ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಿದ್ದ ಪೊಲೀಸರು ಭದ್ರತೆಯ ಕಾರಣದಿಂದ ಬೆಳಗಾವಿ ತಾಲ್ಲೂಕಿನ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಒಪ್ಪಿಸಿದರು. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇನ್ನು ಪೊಲೀಸರು ಬಂಧಿತರ ವಿರುದ್ಧ ಸಮಾಜದ ಸ್ವಾಸ್ಥ್ಯ ಹಾಳುಗೆಡುವ ಸಿಆರ್‌ಪಿಸಿ ೧೧೦ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿಯ ಆಜಮ್ ನಗರದ ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಝಕೀವುಲ್ಲಾ ಫೈಜಿ, ಅಸದಖಾನ್ ಸೊಸೈಟಿ ನಿವಾಸಿ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೀದ ಖಾನ್ ಕಡೋಲಿ, ಶಿವಾಜಿ ನಗರದ ಸಲಾವುದ್ದೀನ ಖಿಲೆವಾಲೆ, ಅಸದಖಾನ್ ನ ಬದ್ರುದ್ದೀನ್ ಪಟೇಲ, ಅಮನ್ ನಗರದ ಸಮೀವುಲ್ಲಾ ಪೀರಜಾದೆ, ಬಾಕ್ಸೈಟ್ ರೋಡ್ ನ ಜಹೀರ ಘೀವಾಲೆ ಹಾಗೂ ವಿದ್ಯಾಗಿರಿಯ ರೆಹಾನ್ ಅಜೀಜ ಎಂಬವರು ಬಂಧಿತರು.
ಬಂಧಿತರಿಂದ ಮೊಬೈಲ್ ಜಪ್ತಿ ಮಾಡಿಕೊಂಡು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಅವರನ್ನು ಸಾಮಾಜಿಕ ಜಾಲತಾಣಗಳ ಅಕೌಂಟ್, ಯಾರೊಂದಿಗೆ ಸಂಪರ್ಕದಲ್ಲಿದ್ದರು, ಎಸ್ಎಇಪಿಐ, ಪಿಎಫ್ಐ ಸಂಘಟನೆ ಸೇರಿದ್ದು ಯಾವಾಗ, ಯಾವ ಕೆಲಸ ಮಾಡುತ್ತಿದ್ದರು ಇತ್ಯಾದಿ ಕುರಿತು ಪರಿಶೀಲಿಸಲಾಗುತ್ತಿದೆ.
ಬಂಧಿತರನ್ನು ಹಿಂಡಲಗಾ ಜೈಲಿನ ಬಾಗಿಲಿನ ಮುಂದೆ ವಾಹನದಿಂದ ಕೆಳಗಿಸಿದಾಗ ಅವರು “ಮುಸ್ಲಿಮ ಮತ್ತು ದಲಿತರಾಗಿರುವದು ಈ ದೇಶದಲ್ಲಿ ಅಪರಾಧ ಎಂಬ ಘೋಷಣೆ ಕೂಗಿದರು” ಎಂದು ಸ್ಥಳದಲ್ಲಿದ್ದವರು ಸಮದರ್ಶಿಗೆ ತಿಳಿಸಿದರು.