ಬೆಳಗಾವಿ : “ತಮ್ಮ ಗ್ರಾಮಗಳಿಗೆ ಮೂಲಭೂತ ಸೌಲಭ್ಯವೊದಗಿಸಿ ಇಲ್ಲವೇ ತಾವು ಕರ್ನಾಟಕಕ್ಕೆ ಸೇರಲು ಅವಕಾಶ ಕೊಡಿ,” ಎಂದು ಆಕ್ಕಲಕೋಟ ತಾಲ್ಲೂಕಿನ 11 ಗ್ರಾಮ ಪಂಚಾಯತಗಳು ಸೊಲ್ಲಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಕ್ಕೆ ಪ್ರತಿಯಾಗಿ ಅವರಿಗೆ ಪೊಲೀಸ್ ನೋಟೀಸ್ ನೀಡಿ ಎಚ್ಚರಿಕೆ ನೀಡಲಾಗಿದೆ.
ಅಕ್ಕಲಕೋಟ ದಕ್ಷಿಣ ಪೊಲೀಸ್ ಠಾಣೆ 11 ಗ್ರಾಮ ಪಂಚಾಯತ ಸರಪಂಚಗಳಿಗೆ ನೋಟೀಸ್ ಜಾರಿಮಾಡಿ ತಾವು ಗ್ರಾಮ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯದಿಂದ ಶಾಂತಿ ಸುವ್ಯವಸ್ಧೆಗೆ ಭಂಗ ತರುವಂತದಾಗಿದೆ. ಪ್ರತಿಭಟನೆ, ಹೋರಾಟಕ್ಕೆ ಮುಂಚೆ ಪೊಲೀಸ್ ಅನುಮತಿ ಪಡೆಯುವದು ಕಡ್ಡಾಯ. ಇದು ಮುಂದುವರೆದರೆ ಸಿಆರ್ ಪಿಸಿ 149 ಅನ್ವಯ ಕ್ರಮ ಜರುಗಿಸಲಾಗುವದು ಎಂಬ ಎಚ್ಚರಿಕೆ ನೀಡಲಾಗಿದೆ. ಸಿಆರ್ ಪಿಸಿ 149 ಅಂದರೆ ” ಜಾಮೀನು ರಹಿತ ಬಂಧನ” ವಾಗಿದೆ.
ಆಳಗೆ, ಶೇಗಾಂವ, ಕಲ್ಲಕರ್ಜಾಳ, ಧಾರಸಂಗ, ಕೆಗಾಂವ, ದೇವಿಕವಟಾ, ಶಾವಳ, ಹಿಳ್ಳಿ, ಅಂದೇವಾಡಿ, ಪಾನ್ ಮಂಗರುಳ ಮತ್ತು ಕೋರ್ಸೆಗಾಂವ ಗ್ರಾಮ ಪಂಚಾಯತಗಳು ಗ್ರಾಮ ಸಭೆಗಳಲ್ಲಿ ಪ್ರತೇಕ ಠರಾವು ಮಂಡಿಸಿ “ಅನೇಕ ವರುಷಗಳಿಂದ ತಮ್ಮ ಗ್ರಾಮಗಳು ಅಭಿವೃದ್ಧಿಯಿಂದ, ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ, ಗ್ರಾಮಗಳಿಗೆ ರಸ್ತೆಗಳಿಲ್ಲ, ರಸ್ತೆ ದೀಪ, ಆಸ್ಪತ್ರೆ, ಕನ್ನಡ ಶಾಲೆ ಮುಂತಾದ ಯಾವುದೂ ಇಲ್ಲ, ಹಾಗಾಗಿ ತಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಲು ಅನುಮತಿ ನೀಡಿ ಎಂದು ಡಿ 2 ರಂದು ಸೋಲಾಪುರ್ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ಮನವಿಯಲ್ಲಿ ವಿನಂತಿಸಿಕೊಂಡಿದ್ದರು. 11 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಚ್ಚ ಕನ್ನಡದ 42 ಗ್ರಾಮಗಳು ಬರುತ್ತವೆ.
ಇದೆ ರೀತಿ ಮಹಾರಾಷ್ಟ್ರ ಸರಕಾರಕ್ಕೆ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಗ್ರಾಮಸ್ಥರು ಬಿಸಿ ಮುಟ್ಟಿಸಿದ್ದಾರೆ. ತಮ್ಮನ್ನೂ ಕರ್ನಾಟಕಕ್ಕೆ ಸೇರಿಸಿ ಎಂದು ಸರಕಾರಕ್ಕೆ ಇತ್ತೀಚಿಗೆ ಮನವಿಕ್ಕೆ ಸಂಧಾನಕ್ಕೆಂದು ಬಂದ ಮಹಾರಾಷ್ಟ್ರದ ಸಚಿವರ ಮುಂದೆ ಕರ್ನಾಟಕದ ಮಾಜಿ ಸಚಿವ ಎಂ.ಬಿ.ಪಾಟೀಲ ಅವರನ್ನು ಹಾಡಿ ಹೊಗಳಿದ್ದಾರೆ. “ಜತ್ತ ತಾಲ್ಲೂಕು ತೀವ್ರ ಬರಗಾಲದಿಂದ ಬಸವಳಿದಿದೆ. ನೀರು ಕೊಡಿ ಎಂದು ದಶಕಗಳ ಕಾಲ ಹೋರಾಡಿದೇವೆ ಆದರೆ ಇವರೆಗೂ ಸ್ಪಂದನೆ ದೊರೆತ್ತಿಲ್ಲ. ಹಾಗಾಗಿ ಕರ್ನಾಟಕಕ್ಕೆ ಸೇರಿಸಲು ನಮಗೆ ನಿರಾಕ್ಷೇಪಣಾ ಪತ್ರ ಕೊಡಿ,” ಎಂದು ಒತ್ತಾಯಿಸಿದ್ದರು.
ಸರಕಾರ ನೀರು ಕೊಟ್ಟಿಲ್ಲ ಆದರೆ ಕರ್ನಾಟಕದ ಅಂದಿನ ನೀರಾವರಿ ಸಚಿವ ಎಂ ಬಿ ಪಾಟೀಲ್ ಕರ್ನಾಟಕದ ಗಡಿಯಲ್ಲಿ ಕೆರೆ ತೋಡಿ ನೀರು ತುಂಬಿಸಿ ಜತ್ ತಾಲೂಕಿಗೆ ನೀರು ದೊರೆಯುವಂತೆ ಮಾಡಿದ್ದರೆಂದು ಅವರು ಮಹಾರಾಷ್ಟ್ರದ ಸಚಿವರಿಗೆ ತಿಳಿಸಿದ್ದರು.
ಜನರನ್ನು ಸಮಾಧಾನಪಡಿಸುವ ಸಲುವಾಗಿ ಸಂಧಾನಕ್ಕೆ ಪ್ರತಿನಿಧಿಯಾಗಿ ಮಹಾರಾಷ್ಟ್ರ ಸಚಿವರನ್ನು ಕಳಿಸಿತ್ತು. ಈ ಘಟನೆಯಿಂದ ಮಹಾರಾಷ್ಟ್ರ ಸಚಿವರಿಗೆ ಇರುಸು ಮುರುಸಾಗಿ ಮಹಾರಾಷ್ಟ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ.