ಹುಬ್ಬಳ್ಳಿ: ಶಿಕ್ಕಲಗಾರ ಸಮುದಾಯದ ಕುಟುಂಬಗಳನ್ನು ಗುರಿಯಾಗಿಸಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿಕ್ಕಲಗಾರ ಸಮುದಾಯ ಹಾಗೂ ಹಿಂದೂ ಮುಖಂಡರು ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಿಕ್ಕಲಗಾರ ಸಮುದಾಯದ ಕುಟುಂಬವೊಂದರಲ್ಲಿ ಮತಾಂತರದ ವಿಚಾರವಾಗಿ ದಂಪತಿಯ ನಡುವೆ ಬಿರುಕು ಮೂಡಿತ್ತು. ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಪತಿಗೆ ಒತ್ತಡ ಹಾಕಿದ್ದು, ಮತಾಂತರ ಆಗದಿದ್ದರೆ ಸಂಸಾರ ಮಾಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇದರಿಂದ ಬೇಸತ್ತ ಪತಿ, ಈ ವಿಚಾರವನ್ನು ಸಮುದಾಯದ ಮುಖಂಡರ ಗಮನಕ್ಕೆ ತಂದಿದ್ದಾರೆ.
ಮತಾಂತರ ಆಗುವಂತೆ ಶಿಕ್ಕಲಗಾರ ಸಮುದಾಯದ ಕೆಲವರು ಹಾಗೂ ಕೆಲ ಕ್ರಿಶ್ಚಿಯನ್ ಮುಖಂಡರು ನನ್ನ ಪತ್ನಿಯ ತಲೆ ಕೆಡಿಸಿದ್ದಾರೆಂದು ಆರೋಪಿಸಿ ಸಂಪತ್ ಬಗನಿ ಎಂಬಾತ ರೌಡಿ ಶೀಟರ್ ಮದನ್ ಬುಗುಡಿ ಸೇರಿದಂತೆ ಹದಿನೈದು ಜನರ ವಿರುದ್ಧ ಮತಾಂತರದ ದೂರು ದಾಖಲಿಸಿದ್ದಾರೆ.
ಇದೀಗ ಪ್ರಕರಣ ವಿಕೋಪಕ್ಕೆ ತಿರುಗಿದ್ದು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಶಿಕ್ಕಲಗಾರ ಸಮುದಾಯದ ಯುವಕರು ಜಯತೀರ್ಥ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮತಾಂತರಕ್ಕೆ ಪ್ರೇರೇಪಣೆ ನೀಡುವವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.