ಬೆಳಗಾವಿ, ೨೩- ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇಷ್ಟೊಂದು ಬಲಿಷ್ಠವಾಗಿ ಉಳಿಯಲು ದೇಶದಲ್ಲಿರುವ ಬಲಿಷ್ಠ ಪತ್ರಿಕೋದ್ಯಮವೇ ಕಾರಣ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಹೇಳಿದರು.
ಬೆಳಗಾವಿಯ ಎಸ್ ಜಿ ಬಾಳೇಕುಂದ್ರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘದ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸಾಮಾನ್ಯ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಜಗತ್ತಿನ ಬಹಳಷ್ಟು ದೇಶಗಳನ್ನು ಮತ್ತು ಭಾರತದ ಅಕ್ಕಪಕ್ಕದ ದೇಶಗಳನ್ನು ನೋಡಿದಾಗ ಅಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಹೋಲಿಸಿದಾಗ ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅತ್ಯಂತ ಬಲಿಷ್ಠವಾಗಿದೆ ಎಂದರು.
ದೇಶದಲ್ಲಿರುವ ನೂರಾರು ಭಾಷೆ, ವಿವಿಧ ಧರ್ಮ, ಸಂಸ್ಕೃತಿಗಳೊಂದಿಗೆ ನಮ್ಮ ಪ್ರಜಾಪ್ರಭುತ್ವವು ಇಷ್ಟೊಂದು ಬಲಿಷ್ಠವಾಗಿ ತನ್ನತನವನ್ನು ಉಳಿಸಿಕೊಂಡಿದೆ. ಅದಕ್ಕೆ ದೇಶದಲ್ಲಿರುವ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿಕೊಳ್ಳುತ್ತಿರುವ ಪತ್ರಿಕೋದ್ಯಮವೇ ಕಾರಣ ಎಂದು ಅವರು ಹೇಳಿದರು.
ಜವಾಬ್ದಾರಿಯುತ ಪತ್ರಿಕೋದ್ಯಮವು ಸಮಾಜಕ್ಕೆ ಬೇಕಾಗಿರುವುದನ್ನು ಕೊಡುತ್ತಿರುವುದರಿಂದ ಆರೋಗ್ಯಪೂರ್ಣವಾದ ಸಮಾಜ ಇದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವ ಪತ್ರಕರ್ತರು ಅತ್ಯಂತ ಜವಾಬ್ದಾರಿಯುತವಾಗಿ ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ ಎಂದೂ ಅವರು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕಮೇಲ್ ಪತ್ರಕರ್ತರ ಹಾವಳಿ ಕುರಿತು ಪ್ರಸ್ತಾಪಿಸಿದ ಅವರು, ಬ್ಲ್ಯಾಕಮೇಲ್ ಗೆ ಒಳಗಾದವರು ಧೈರ್ಯದಿಂದ ಮುಂದೆ ಬಂದು ದೂರು ಸಲ್ಲಿಸಬೇಕು. ಆಗ ಖಂಡಿತವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇತ್ತೀಚಿನ ಹಲವು ಪ್ರಕರಣಗಳಲ್ಲಿ ಕ್ರಮ ಆಗಿದೆ ಬ್ಲ್ಯಾಕಮೇಲ್ ತಡೆಯುವ ನಿಟ್ಟಿನಲ್ಲಿ ತಮ್ಮಿಂದಾದ ಕ್ರಮಗಳನ್ನು ಕೈಗೊಳ್ಳಲು ತಾವು ಸಿದ್ಧ ಎಂದವರು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಬೆಳಗಾವಿ ಕಾರಂಜಿಮಠದ ಉತ್ತರಾಧಿಕಾರಿಗಳಾದ ಡಾ. ಶಿವಯೋಗಿ ಮಹಾಸ್ವಾಮಿ ಆಶೀರ್ವಚನ ನೀಡಿದರು. ಸ್ವಸ್ಥ ಸಮಾಜಕ್ಕಾಗಿ ಎಲ್ಲರೂ ಪ್ರಾಮಾಣಿಕವಾಗಿ ದುಡಿಯಬೇಕು, ಜನಸಾಮಾನ್ಯರು ಕಾಣದ್ದನ್ನು ಪತ್ರಕರ್ತರು ಕಾಣುತ್ತಾರೆ. ವಕೀಲರು, ಪೊಲೀಸರು, ಪತ್ರಕರ್ತರು, ಸ್ವಾಮಿಗಳು ಮತ್ತು ಇತರ ಅಧಿಕಾರಿಗಳು ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ಇರುತ್ತಾರೆ. ಇವರೆಲ್ಲ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಒಂದೇ ಒಂದು ಸಣ್ಣ ತಪ್ಪಿಗಾಗಿ ಸಾರ್ವಜನಿಕರಿಂದ ಅತಿ ಹೆಚ್ಚು ಟೀಕೆಗೆ ಒಳಗಾಗುತ್ತಾರೆ, ಅತಿ ಹೆಚ್ಚು ನಿಂದನೆಗೆ ಒಳಗಾಗುತ್ತಾರೆ. ಹೀಗಾಗಿ ಅತೀ ಹೆಚ್ಚು ಕಾಳಜಿಯಿಂದ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಶಿವಯೋಗಿ ಸ್ವಾಮಿಗಳು ಹೇಳಿದರು.
ಎಲ್ಲರಿಗಿಂತ ಮುಂದೆ ಅತಿ ಬೇಗ ಸುದ್ದಿ ಕೊಡುವ ಗಡಿಬಿಡಿಯಲ್ಲಿ ಕೆಲವು ಅವಾಂತರಗಳು ಘಟಿಸುತ್ತವೆ. ಆದರೆ ಹಾಗಾಗಬಾರದು. ಆದರೆ ಮುದ್ರಕರು ಮತ್ತು ಮುದ್ರಣ ಮಾಧ್ಯಮದಿಂದ ಅತ್ಯುತ್ತಮ ಮತ್ತು ವ್ಯವಸ್ಥಿತ ಕಾರ್ಯ ನಡೆಯುತ್ತಿರುವುದು ಗಮನಾರ್ಹ ಎಂದವರು ಹೇಳಿದರು.
ನಂತರ ನಡೆದ ಚರ್ಚೆಯಲ್ಲೂ ಸಾಕ್ಷಿಯ ಶ್ರೀಗಳು ಸಂಘದ ಚಟುವಟಿಕೆಗಳ ಕುರಿತು ಅತ್ಯಂತ ತೃಪ್ತಿಯನ್ನು ವ್ಯಕ್ತಪಡಿಸಿ, ಇದೇ ರೀತಿ ಅತ್ಯುತ್ತಮ ಕಾರ್ಯ ಈ ಸಂಘಟನೆಯಿಂದಾಗಲಿ ಎಂದು ಹರಿಸಿದರು.
ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಮಾತನಾಡಿ, ಸಂಘದ ಸದಸ್ಯರಿಗಾಗಿ ಈ ವರೆಗೆ ಇದ್ದ ರೂ. ಎರಡು ಲಕ್ಷ ರೂಪಾಯಿ ಅಪಘಾತ ವಿಮಾ ಯೋಜನೆಯನ್ನು 4 ಲಕ್ಷ ರೂ.ಗಳಿಗೆ ಏರಿಸಲಾಗಿದ್ದು ಆಯೋಜನೆ ಇಂದಿನಿಂದಲೇ ಜಾರಿಯಾಗುತ್ತದೆ ಎಂದರು .
ಕರ್ನಾಟಕ ರಾಜ್ಯ ವಿತರಕರ ಸಂಘವು ಕರ್ನಾಟಕ ಪತ್ರಕರ್ತರ ಸಂಘ ದೊಂದಿಗೆ ಅಫಿಲಿಯೇಷನ್ ಹೊಂದಿದ್ದು ಈ ಸಂಘದ ಸದಸ್ಯರಿಗಿರುವ ಎಲ್ಲ ಸವಲತ್ತುಗಳು ಆ ಸಂಘದ ಸದಸ್ಯರಿಗೂ ಅನ್ವಯವಾಗುತ್ತವೆ ಎಂದರು.
ನಾಗನೂರು ಮಠದ ಪೀಠಾಧ್ಯಕ್ಷರಾದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಟ್ರಸ್ಟ್ ನ ಗೌರವ ಅಧ್ಯಕ್ಷರಾಗಿರುವುದಾಗಿ ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಎಲ್ ಎಸ್ ಶಾಸ್ತ್ರಿ ಮಾತನಾಡಿ, ಹಿಂದಿನಂತೆ ಆದರ್ಶಪ್ರಾಯರಾದ ಪತ್ರಕರ್ತರು ಇಂದಿಲ್ಲ. ಹಿಂದೆ ಸಮಾಜಕ್ಕೆ ಶಿಕ್ಷಣ, ನೀತಿ, ಧರ್ಮ ಬೋಧನೆಗಾಗಿ ಪತ್ರಿಕೆಗಳಿದ್ದವು, ಇಂದು ಅದಾವುದೂ ಇಲ್ಲ ಎಂದರು.
ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಯನ್ನು ಮರೆತು, ಸಾರ್ವಜನಿಕ ಹಿತಾಸಕ್ತಿಯನ್ನು ಮರೆತು ಸ್ವಹಿತಾಸಕ್ತಿಯಲ್ಲಿಯೇ ತೊಡಗಿರುವ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಾಸ್ತ್ರಿ ಕಳವಳ ವ್ಯಕ್ತಪಡಿಸಿದರು .
ಸಾಮಾಜಿಕ ಜಾಲತಾಣಗಳು ಈ ಸೌಕರ್ಯವನ್ನು ದುರುಪಯೋಗ ಮಾಡಿಕೊಳ್ಳದೇ ಸಮಾಜಕ್ಕೆ ಶಿಕ್ಷಣ ಮತ್ತು ಒಳ್ಳೆಯ ಸಂದೇಶ ನೀಡಲು ಬಳಸಬೇಕು, ಸುಂದರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದವರು ಹೇಳಿದರು.
ಕಳೆದ ಎರಡು ದಶಕಕ್ಕೂ ಅಧಿಕ ಕಾಲದಿಂದ ಪತ್ರಕರ್ತರಿಗಾಗಿ ಕಾರ್ಯ ಮಾಡುತ್ತಿರುವ ಸಂಘದ ಚಟುವಟಿಕೆಯನ್ನು ಶಾಸ್ತ್ರಿ ಪ್ರಶಂಶಿಸಿದರು. ದೇಶದಲ್ಲಿನ ಶೇಕಡಾ ತೊಂಭತ್ತರಷ್ಟು ಸ್ಥಳೀಯ ಪತ್ರಿಕೆಗಳ ಸ್ಥಿತಿ ಇಂದಿಗೂ ಸುಧಾರಿಸಿಲ್ಲ, ಅವನ್ನು ಬಲಾಢ್ಯಗೊಳಿಸುವ ಕಾರ್ಯ ಆಗಬೇಕಿದೆ ಎಂದರು.
ಓರಿಯೆಂಟಲ್ ಇನ್ಶೂರೆನ್ಸ್ ಕಂಪೆನಿಯ ಕೇಶವ ರೇವಣಕರ ಮಾತನಾಡಿ ವಿಮಾ ಯೋಜನೆಯನ್ನು ವಿವರಿಸಿದರು.
ಕರ್ನಾಟಕ ರಾಜ್ಯ ವಿತರಕರ ಸಂಘದ ಅಧ್ಯಕ್ಷ ಶಂಕರ ಕುದುರಿಮೋತಿ, ಸಂಘದ ಕಾನೂನು ಸಲಹೆಗಾರ ಮಂಜುನಾಥ ತೋರಗಲ್,ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿಯ ಗಜಾನನ ಬಾಂದೇಕರ, ಸಂಘದ ಉಪಾಧ್ಯಕ್ಷರಾದ ಸುದೇಶ ಕುಮಾರ, ಗೌರೀಶ ಶಾಸ್ತ್ತ್ರಿ ,ಪ್ರಧಾನ ಕಾರ್ಯದರ್ಶಿ ಸಂಪತಕುಮಾರ ಮುಚಳಂಬಿ, ರಾಜ್ಯ ಕಾರ್ಯದರ್ಶಿಗಳಾದ ಕೆ. ಗೋಪಾಲ್ ಮತ್ತು ಶರಣಪ್ಪ ಗುಮಗೇರಾ, ಡಿ.ಬಿ. ವಿಜಯ ಶಂಕರ, ಅರುಣ ಭೂಪಾಲ್, ಶರಣು ಕಾಟಕರ , ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಚಿಕ್ಕಮಠ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿಗಳಾದ ಸುದೇಶ ಕುಮಾರ ಸ್ವಾಗತಿಸಿದರು. ಇಪ್ಪತ್ತು ಜಿಲ್ಲೆಗಳ 170 ಪದಾಧಿಕಾರಿಗಳ ಭಾಗವಹಿಸಿದ್ದ ಕಾರ್ಯಕ್ರಮವನ್ನು ವಸಂತ ಹೊಸಮನಿ ನಿರೂಪಿಸಿ, ವಂದಿಸಿದರು.