ಜೈಪುರ : ರಾಜಸ್ಥಾನದಲ್ಲಿ ದೊಡ್ಡ ರಾಜಕೀಯ ಬಿಕ್ಕಟ್ಟು ಉದ್ಭವಿಸಿದೆ. ಸಚಿನ್ ಪೈಲಟ್‌ಗೆ ಅಧಿಕಾರ ಹಸ್ತಾಂತರಿಸುವುದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಬೆಂಬಲಿಗ ಶಾಸಕರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ಗೆಹ್ಲೋಟ್ ಬಣದ ಎಲ್ಲಾ ಶಾಸಕರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಎಲ್ಲಾ ಶಾಸಕರು ತಮ್ಮ ರಾಜೀನಾಮೆಯನ್ನು ಸಭಾಪತಿ ಸಿಪಿ ಜೋಶಿ ಅವರಿಗೆ ಸಲ್ಲಿಸಲಿದ್ದಾರೆ.
ಎಲ್ಲಾ ಶಾಸಕರು ಕೋಪಗೊಂಡು ರಾಜೀನಾಮೆ ನೀಡುತ್ತಿದ್ದಾರೆ ಎಂದು ರಾಜಸ್ಥಾನ ಸರ್ಕಾರದ ಸಚಿವ ಮತ್ತು ಗೆಹ್ಲೋಟ್ ಅವರ ಆಪ್ತರಾದ ಪ್ರತಾಪ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ.
ಇದಕ್ಕಾಗಿ ರಾಷ್ಟ್ರಪತಿಗಳ ಮೊರೆ ಹೋಗುತ್ತೇವೆ. ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಸಂಪರ್ಕಿಸದೆ ಹೇಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು 92 ಶಾಸಕರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂಬ ನಿರ್ಣಯವನ್ನು ಅಂಗೀಕರಿಸುವಂತೆ ಶಾಸಕರಿಗೆ ಸೂಚಿಸಲಾಯಿತು.

