ಬೆಳಗಾವಿ, 28: ಮಹಾನಗರಪಾಲಿಕೆಯ ಒಡೆತನದ ಬಸವೇಶ್ವರ ವೃತ್ತದ (ಗೋವಾ ವೇಸ್) ಬಳಿ ನೂತನವಾಗಿ ನಿರ್ಮಿಸಿರುವ “ತಿನಸು ಕಟ್ಟೆ”(ಖಾವೊ ಖಟ್ಟಾ) ಯಲ್ಲಿ ತಮ್ಮ ಪ್ರಭಾವ ಬಳಸಿ ಎರಡು ಮಳಿಗೆಗಳನ್ನು ಪಡೆದಿರುವ ಬೆಳಗಾವಿ ಮಹಾನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು ತಮ್ಮ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆಯಿದೆ.
ಪಾಲಿಕೆಯ ವಿಭಾಗ ಸಂಖ್ಯೆ 23ರ ಸದಸ್ಯ ಜಯಂತ ಜಾಧವ ಮತ್ತು ವಿಭಾಗ 41ರ ಮಂಗೇಶ ಪವಾರ ತಮ್ಮ ಸದಸ್ಯತ್ವ ಮತ್ತು ರಾಜಕೀಯ ಪ್ರಭಾವ ಬಳಸಿ ತಮ್ಮ ಹತ್ತಿರದ ಸಂಬಂಧಿಕರಿಗೆ ತಲಾ ಒಂದೊಂದು ಮಳಿಗೆ ಕೊಟ್ಟಿದ್ದಾರೆ. ಇದು ಅಕ್ರಮ, ಕಾನೂನುಬಾಹೀರವಾಗಿದ್ದು ಹಾಗಾಗಿ ಇವರ ಪಾಲಿಕೆ ಸದಸ್ಯತ್ವವು ಕರ್ನಾಟಕ ಮುನ್ಸಿಪಲ್ ಕಾಯ್ದೆ 1976-ರ ಕಲಂ 26(1) ಕೆ ಅನ್ವಯ ರದ್ದಾಗಬೇಕೆಂದು ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ ಅವರು ಸೋಮವಾರ ಬೆಳಗಾವಿ ವಿಭಾಗಾಧಿಕಾರಿ ಶೆಟ್ಟನ್ನವರ ಅವರಿಗೆ ಮನವಿ ಅರ್ಪಿಸಿದ್ದರು. ಶೆಟ್ಟನ್ನವರ ಈ ಕುರಿತು ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಸೂಚಿಸಿದ್ದರು. ಅದರಂತೆ “ಅಕ್ರಮವಾಗಿ ಪಡೆದುಕೊಂಡಿದ್ದು ಸಾಬೀತಾದರೆ ಕರ್ನಾಟಕ ಮುನ್ಸಿಪಲ್ ಕಾಯ್ದೆ 1976ರ ಅನ್ವಯ ಕ್ರಮ ಜರುಗಿಸಿ” ಎಂದು ಮಹಾನಗರ ಪಾಲಿಕೆಯ ಕಮಿಷನರ್ ಅಶೋಕ ದುಡಗುಂಟಿ ಅವರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದು ಸೂಚಿಸಿದ್ದಾರೆ.
ಸರಕಾರ ಬೆಳಗಾವಿ ಮಹಾನಗರ ಪಾಲಿಕೆಗೆ ಸಾರ್ವಜನಿಕ ಕಾಮಗಾರಿ ವಿಭಾಗದ ಮೂಲಕ ಒಂದೇ ರಸ್ತೆಯಲ್ಲಿ ಹಲವಾರು ತಿನಿಸು ಮಳಿಗೆಯನ್ನು ಕಟ್ಟಿಸಿಕೊಟ್ಟಿದೆ. ಪಾಲಿಕೆ ಮಳಿಗೆಗಳನ್ನು ಹಂಚಿಕೆ ಮಾಡುವಾಗ ರಾಜಕೀಯ ಒತ್ತಡಕ್ಕೆ ಒಳಗಾಗಿ ಬಿಜೆಪಿಯವರಿಗೇನೇ ಗುತ್ತಿಗೆ ಆಧಾರದ ಅನ್ವಯ ಮಳಿಗೆ ನೀಡಲಾಗಿದೆ. ಪರಿಶಿಷ್ಟ ಜಾತಿ ಪಂಗಡ, ಹಿಂದುಳಿದ ವರ್ಗದವರು, ಮಹಿಳೆಯರಿಗೆ ಮೀಸಲಾದ ಮಳಿಗೆಗಳನ್ನೂ ಸಹ ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗಿದ್ದು ಬೆಳಗಾವಿ ದಕ್ಷಿಣ ವಿಭಾಗದ ಶಾಸಕ ಅಭಯ ಪಾಟೀಲ ಸೂಚಿಸಿದವರಿಗೆಲ್ಲ ಮಳಿಗೆಗಳನ್ನು ನೀಡಲಾಗಿದೆ. ಇದರಿಂದ ಭಾರಿ ಭ್ರಷ್ಟಾಚಾರ ನಡೆದಿದ್ದಲ್ಲದೇ ಸರಕಾರಿ ಹಣದಿಂದ ಮಳಿಗೆಗಳನ್ನು ನಿರ್ಮಿಸಿದ್ದರೂ ಶಾಸಕ ಅಭಯ ಪಾಟೀಲ ಅವರು ಕಟ್ಟಡದ ಪ್ರತಿ ಕಂಬದ ಮೇಲೂ ತಮ್ಮ ಭಾವಚಿತ್ರದ ಫಲಕ ಹಚ್ಚಿದ್ದಾರೆ. ಇದು ಅಕ್ರಮವೆಂದು ಕಾಂಗ್ರೆಸ್ ಆರೋಪಿಸಿತ್ತು.
ಈ ಕುರಿತು ಸಾರ್ವಜನಿಕ ಕಾಮಗಾರಿ ವಿಭಾಗದ ಉನ್ನತ ಅಧಿಕಾರಿಗಳು ಇತ್ತೀಚಿಗೆ ಮಳಿಗೆಗೆ ಭೆಟ್ಟಿ ನೀಡಿ ತನಿಖೆ ನಡೆಸಿದ್ದನ್ನು ಸ್ಮರಿಸಬಹುದು.