ಬಿಜೆಪಿ ಸಂಸದನ ವಿರುದ್ಧ ಗಂಭೀರ ಆರೋಪಗಳಿದ್ದರೂ ಕ್ರಮ ಏಕಿಲ್ಲ? -ಪ್ರಧಾನಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

A B Dharwadkar
ಬಿಜೆಪಿ ಸಂಸದನ ವಿರುದ್ಧ ಗಂಭೀರ ಆರೋಪಗಳಿದ್ದರೂ ಕ್ರಮ ಏಕಿಲ್ಲ?  -ಪ್ರಧಾನಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ಹೊಸದಿಲ್ಲಿ, ೨- ಓಲಂಪಿಕ್‌ ಪ್ರಶಸ್ತಿ ವಿಜೇತ ದೇಶದ  ಕುಸ್ತಿಪಟುಗಳು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗು ಬಿಜೆಪಿ ಸಂಸತ್‌ ಸದಸ್ಯ ಬ್ರಿಜ್ ಭೂಷಣ ಶರಣ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರದ ಈ ಕ್ರಮದ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧದ ಎಫ್‌ಐಆರ್‌ಗಳಲ್ಲಿ ಉಲ್ಲೇಖಿಸಲಾದ ಆರೋಪಗಳನ್ನು ವಿವರಿಸುವ ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ ಅವರು, ”ನರೇಂದ್ರ ಮೋದಿಜಿ, ಈ ಗಂಭೀರ ಆರೋಪಗಳನ್ನು ಓದಿ ಮತ್ತು ಆರೋಪಿಗಳ ವಿರುದ್ಧ ಇಲ್ಲಿಯ ವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂಬುದನ್ನು ದೇಶಕ್ಕೆ ತಿಳಿಸಿ”  ಎಂದು ಕೇಳಿದ್ದಾರೆ.

ಆರೋಪಿ ವಿರುದ್ಧ ಅನುಚಿತ ಸ್ಪರ್ಶದ ಎರಡು ಎಫ್​ಐಆರ್​ ಮತ್ತು 10 ದೂರುಗಳನ್ನು ದೆಹಲಿ ಪೊಲಿಸರು ದಾಖಲಿಸಿದ್ದಾರೆ. ದೂರಿನಲ್ಲಿ ಅನುಚಿತವಾಗಿ ಸ್ಪರ್ಶಿಸುವುದು, ಬೆದರಿಕೆ, ಲೈಂಗಿಕ ಕಿರುಕುಳ, ಅನುಚಿತ ವರ್ತನೆ, ಯಾವುದೇ ನೆಪದಲ್ಲಿ ಸ್ಥನಗಳನ್ನು ಮುಟ್ಟುವುದು ಸೇರಿದಂತೆ 10 ಪ್ರಕರಣಗಳು ಬಿಜೆಪಿ ಸಂಸದರ ವಿರುದ್ಧ ದಾಖಲಾಗಿವೆ.

ಕುಸ್ತಿಪಟುಗಳು ಎಪ್ರಿಲ್ 21 ರಂದು ಭಾರತ ಕುಸ್ತಿ ಫೆಡರೇಶನ್ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ ಸಿಂಗ್ ವಿರುದ್ಧ ಕೆನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  ಆದರೆ ಕುಸ್ತಿಪಟುಗಳು ಸುಪ್ರೀಮ ಕೋರ್ಟ್‌ಗೆ ಮೊರೆ ಹೋದ ನಂತರ ಮಾತ್ರ ದೆಹಲಿ ಪೊಲೀಸರು ಏಪ್ರಿಲ್ 28 ರಂದು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದರು. ಈ ಎರಡೂ ಎಫ್‌ಐಆರ್‌ಗಳ ಪ್ರತಿಗಳು ಮುನ್ನೆಲೆಗೆ ಬಂದಿವೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆ, ಲೈಂಗಿಕ ಕಿರುಕುಳ, ಹಿಂಬಾಲಿಸುವುದು ಮತ್ತು ಸಾಮಾನ್ಯ ಉದ್ದೇಶ ಸೇರಿದಂತೆ ಆರೋಪ ಹೊರಿಸಲಾಗಿದೆ.

ಅದೇ ವರದಿಯನ್ನು ಉಲ್ಲೇಖಿಸಿ, ಶಿವಸೇನಾ (ಉದ್ಧವ ಠಾಕ್ರೆ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ”ಈ ಮನುಷ್ಯನನ್ನು (ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ ಸಿಂಗ್) ರಕ್ಷಿಸುವುದನ್ನು ಪ್ರಧಾನಿ ಮೋದಿ ಮುಂದುವರೆಸಿದ್ದಾರೆ” ಎಂದು ಆರೋಪಿಸಿದ್ದಾರೆ.

ರಾಷ್ಟ್ರದ ಪ್ರಧಾನಿ ಈ ವ್ಯಕ್ತಿಯನ್ನು ರಕ್ಷಿಸುವುದನ್ನು ಮುಂದುವರೆಸಿದ್ದಾರೆ. ರಾಷ್ಟ್ರದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವರು ಈ ವ್ಯಕ್ತಿಯ ಬಗ್ಗೆ ಮೌನವಾಗಿದ್ದಾರೆ. ರಾಷ್ಟ್ರದ ಕ್ರೀಡಾ ಸಚಿವರು ಈ ವ್ಯಕ್ತಿ ವ್ಯಕ್ತಿಯ ವಿಚಾರದಲ್ಲಿ ಕಣ್ಣು ಮುಚ್ಚಿ ಕುಳಿತಿದ್ದಾರೆ. ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ದೆಹಲಿ ಪೊಲೀಸರು ವಿಳಂಬ ಮಾಡುತ್ತಲೇ ಇದ್ದಾರೆ. ಈ ವ್ಯಕ್ತಿಯನ್ನು ಸರ್ಕಾರ ಮತ್ತು ಬಿಜೆಪಿ ಏಕೆ ರಕ್ಷಿಸುತ್ತಿದೆ? ಯಾವುದೇ ಉತ್ತರಗಳು?” ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಹೆಚ್ಚುವರಿಯಾಗಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿಯೂ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಎಫ್‌ಐಆರ್‌ನಲ್ಲಿ ಡಬ್ಲ್ಯುಎಫ್‌ಐ ಕಾರ್ಯದರ್ಶಿ ವಿನೋದ್ ತೋಮರ್ ಹೆಸರೂ ಇದೆ. 2016 ರಿಂದ ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ 17 ವರ್ಷದ ಬಾಲಕಿಯ ತಂದೆ ಆಕೆಯ ಪರವಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಸಂಸದ ಬಲವಂತವಾಗಿ ಹುಡುಗಿಯನ್ನು ತನ್ನ ಕಡೆಗೆ ಎಳೆದುಕೊಂಡು ಅವಳನ್ನು ಬಿಗಿಯಾಗಿ ಹಿಡಿದಿದ್ದ, ಅವಳು ಚಲಿಸಲು ಅಥವಾ ತನ್ನ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ಆ ಅಪ್ರಾಪ್ತ ಬಾಲಕಿಯ ತಂದೆ  ದೂರಿನಲ್ಲಿ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.