ಬೆಳಗಾವಿ, ಜೂನ್ 12: ಇಲ್ಲಿನ 4ನೇ ಜೆ ಎಂ ಎಫ್ ಸಿ ಕೋರ್ಟ ಹಾಲ್ ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪಿಯ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಲಯದಲ್ಲಿ ಪೋಲಿಸ್ ಬಂಧನಕ್ಕೆ ಕೇಳಿ ಮನವಿ ಮಾಡಲಾಗುವದು ನಂತರ ತನಿಖೆ ಮುಂದುವರೆಸಲಾಗುವದು ಎಂದು ಡಿಸಿಪಿ ರೋಹನ ಜಗದೀಶ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಜಯೇಶ ಪೂಜಾರಿ ಎನ್ನುವ ಆರೋಪಿಯನ್ನು ಬೆಳಗ್ಗೆ 11 ಗಂಟೆಗೆ ಕೋರ್ಟಗೆ ಹಾಜರು ಪಡಿಸಿದ ಸಂದರ್ಭದಲ್ಲಿ ಈ ಕೃತ್ಯ ನಡೆದಿದ್ದು, ಕೈದಿ ಜಯೇಶ ಪೂಜಾರಿಯು ಶಾಕೀರ ಮೊಹಮ್ಮದ್ ಆಗಿ ಹೆಸರು ಬದಲಾಯಿಸಿಕೊಂಡಿದ್ದಾನೆ ಎಂದು ಡಿಸಿಪಿ ಹೇಳಿದರು.
ಆರೋಪಿಯ ವಿರುದ್ಧ ಡಬಲ್ ಮರ್ಡರ್ ಹಾಗೂ ಕೇಂದ್ರ ಸಚಿವ ನಿತಿನ ಗಡ್ಕರಿ, ಎಡಿಜಿಪಿ ಅಶೋಕ ಕುಮಾರ ಅವರಿಗೆ ಫೋನ್ ಮೂಲಕ ಬೆದರಿಕೆ ಹಾಕಿರುವ ಪ್ರಕರಣಗಳು ಇವೆ.
2018ರ ಎಡಿಜಿಪಿ ಅಲೋಕ ಕುಮಾರ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತು ವಿಚಾರಣೆಗೆ ಬುಧವಾರ ಕೋರ್ಟಗೆ ಹಾಜರು ಪಡಿಸಲಾಗಿತ್ತು, ಈತ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಗೆ ಒಳಗಾದ ಕೈದಿಯಾಗಿದ್ದಾನೆ.
ಪೂಜಾರಿಯು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದರಿಂದ ಕುಪಿತರಾದ ಕೋರ್ಟ ಆವರಣದಲ್ಲಿದ್ದ ಜನರು ಆತನ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಆತನನ್ನು ಬಚಾವ್ ಮಾಡಲು ಅಲ್ಲಿದ್ದ ಪೊಲೀಸರು ಹರಸಾಹಸಪಟ್ಟರು. ನಂತರ ಅವನನ್ನು ಪೊಲೀಸ ವಾಹನದಲ್ಲಿ ಸಾಗಿಸಲಾಯಿತು.