ಬಾಗಲಕೋಟ, 17- ಬಾಗಲಕೋಟ ನಗರದಲ್ಲಿ ಅನುಮತಿಯಿಲ್ಲದೇ ಸ್ಥಾಪಿಸಲಾಗಿದ್ದ ಶಿವಾಜಿ ಪ್ರತಿಮೆಯನ್ನು ಜಿಲ್ಲಾಡಳಿತ ಬುಧವಾರ ರಾತ್ರಿ ತೆರವುಗೊಳಿಸಿದೆ. ಇದನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದು ಗಲಾಟೆ ಮಾಡದಂತೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.
ಬಾಗಲಕೋಟ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಭಾರತೀಯ ದಂಡ ಸಂಹಿತೆ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಆದೇಶ ಹೊರಡಿಸಿದ್ದಾರೆ.
ನಗರದ ಲಯನ್ಸ ವೃತ್ತದಲ್ಲಿ ಅನುಮತಿಯಿಲ್ಲದೇ ಏಕಾಏಕಿ ಶಿವಾಜಿ ಪ್ರತಿಮೆ ಸ್ಥಾಪನೆ ಮಾಡಲಾಗಿತ್ತು ಎನ್ನಲಾಗಿದೆ. ಅದನ್ನು ಬುಧವಾರ ರಾತ್ರಿ ತೆರವುಗೊಳಿಸಲಾಗಿದ್ದು ಇದನ್ನು ಪ್ರತಿಭಟಿಸಿ ಗುರುವಾರ ಬಿಜೆಪಿ ಮುಖಂಡರಾದ ನಾರಾಯಣ ಭಾಂಡೆಗೆ, ರಾಜು ನಾಯ್ಕರ, ಬಸವರಾಜ ಯಂಕಂಚಿ ಹಾಗೂ ಸಂಘ ಪರಿವಾರದ ಹಲವು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಅನಧಿಕೃತ ಪ್ರತಿಮೆ ಇದ್ದ ಸ್ಥಳದಲ್ಲಿ ಬಿಗಿ ಬಂದೋಬಸ್ತ ಮಾಡಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ ಅವರು ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಯಾವುದೇ ಅನುಮತಿ ಇಲ್ಲದೇ ಶಿವಾಜಿ ಪ್ರತಿಮೆಯನ್ನು ಅನಧಿಕೃತವಾಗಿ ಸ್ಥಾಪಿಸಲಾಗಿತ್ತು. ಆದ್ದರಿಂದ ಅದನ್ನು ತೆರವುಗೊಳಿಸಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಗಸ್ಟ 18ರ ವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ ಜಾನಕಿ ತಿಳಿಸಿದ್ದಾರೆ.