ಮುನವಳ್ಳಿ, ಎ. ೧೯: ಹುಬ್ಬಳ್ಳಿಯ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಂತಕನ ಊರಾದ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಜನರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಮುನವಳ್ಳಿ ಸಂಪೂರ್ಣ ಬಂದ್ ಆಗಿದೆ.
ಹಂತಕ ಫಯಾಜನಿಗೆ ಹಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳು, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರೆ, ಮುಸ್ಲಿಂ ಸಮಾಜದವರೂ ಸಹ ಬೃಹತ್ ಪ್ರತಿಭಟನೆ ನಡೆಸಿ, ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಮುನವಳ್ಳಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಯವರು, ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಾದ್ಯಂತ ಕೃತ್ಯ ಖಂಡಿಸಿ ಪ್ರತಿಭಟನೆ ನಡೆಯುತ್ತಿವೆ.
ಸ್ಥಳಕ್ಕೆ ಪ್ಯಾರಾ ಮಿಲಿಟರಿ ಸೇರಿದಂತೆ ವಿವಿಧ ಪೊಲೀಸ್ ಪಡೆಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.