ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದೈಹಿಕ ಶಿಕ್ಷಕನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದ ಬಿ.ಆರ್. ಅಂಬೇಡ್ಕರ ವಸತಿ ಶಾಲೆ ಶಿಕ್ಷಕ ಶಂಕ್ರಪ್ಪ ಬಸಪ್ಪ ಹನುಮಗೊಂಡ(32) ಬಂಧಿತ ಆರೋಪಿ.
ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗೆ ಬ್ಲೂಟೂತ್ ಮೂಲಕ ಉತ್ತರಗಳನ್ನು ಹೇಳಿದ್ದ ಆರೋಪದಡಿ ಶಂಕ್ರಪ್ಪನನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲನ ನಿಕಟವರ್ತಿಯಾಗಿದ್ದ ಶಂಕ್ರಪ್ಪ ಅಭ್ಯರ್ಥಿಗಳನ್ನು ಹುಡುಕಿ ಹಣದ ವ್ಯವಹಾರ ಮಾಡುತ್ತಿದ್ದ. ತುಮಕೂರಿನ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಶ್ರೀಶೈಲ ಬಿರದಾರ ಎಂಬಾತನಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳಿದ್ದ ಆರೋಪದ ಮೇಲೆ ಶಂಕ್ರಪ್ಪನನ್ನು ಬಂಧಿಸಲಾಗಿದೆ.
ಅಭ್ಯರ್ಥಿಯಿಂದ 30 ಲಕ್ಷದ ಪೈಕಿ 20 ಲಕ್ಷ ರೂ ಪಡೆದುಕೊಂಡಿದ್ದ ಶಂಕ್ರಪ್ಪನನ್ನು ಸಿಐಡಿ ಡಿ.ವೈ.ಎಸ್.ಪಿ. ಶಂಕರಗೌಡ ಪಾಟೀಲ, ಸಿಐಡಿ ಡಿಟೆಕ್ಟಿವ್ ಇನ್ಸ್ ಪೆಕ್ಟರ್ ಆನಂದ, ಸಿಬ್ಬಂದಿ ಕುಮಾರವ್ಯಾಸ, ಚಿತ್ತಾಪುರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.