ಹುಣಸೂರು (ಮೈಸೂರು), ೨೪: ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಸಹೋದರಿಯನ್ನು ಅವರ ಅಣ್ಣನೇ ಕೆರೆಗೆ ತಳ್ಳಿ ಹತ್ಯೆಗೈದ ಘಟನೆ ಹುಣಸೂರು ತಾಲೂಕಿನ ಮರೂರಿನಲ್ಲಿ ನಡೆದಿದೆ. ಇದೇ ವೇಳೆ ಮಗಳನ್ನು ರಕ್ಷಿಸಲು ಕೆರೆಗೆ ಇಳಿದ ತಾಯಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದ ಧನುಶ್ರೀ (19) ಮತ್ತು ತಾಯಿ ಅನಿತಾ (43) ಮೃತಪಟ್ಟ ದುರ್ದೈವಿಗಳು.
ಹುಣಸೂರಿನ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಧನುಶ್ರೀ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ವಿಷಯ ತಿಳಿದ ನಿತೀಶ ತಂಗಿಗೆ ಬುದ್ದಿ ಹೇಳಿದ್ದ. ಮನೆಯವರಿಗೂ ಮಾಹಿತಿ ನೀಡಿದ್ದ. ಈ ಬಗ್ಗೆ ಜಗಳವೂ ನಡೆದಿತ್ತು.
ಇತ್ತೀಚೆಗೆ ಧನ್ಯಶ್ರೀ ಶ್ರೀ ಇನಸ್ಟಾಗ್ರಾಮನಲ್ಲಿ ಬುರ್ಖಾ ಧರಿಸಿಕೊಂಡು ಹೆಸರು ಬದಲಾಯಿಸಿಕೊಂಡಿದ್ದ ಬಗ್ಗೆ ಪೋಸ್ಟ ಮಾಡಿದ್ದಳು. ಇದನ್ನು ನೋಡಿ ಕೆಂಡಾಮಂಡಲನಾದ ನಿತೀಶನು ತಾಯಿಗೆ ತಿಳಿಸಿದ್ದಲ್ಲದೇ ತಂಗಿಯೊಂದಿಗೆ ಜಗಳ ಮಾಡಿದ್ದ. ಮಂಗಳವಾರ ತಂಗಿಯನ್ನು ಹಮ್ಮಿಗೆಯ ಅಜ್ಜಿ ಮನೆಗೆ ಬಿಡುವುದಾಗಿ ತಾಯಿಗೆ ಹೇಳಿ ಮೂವರು ಸಂಜೆ ಹಿರಿಕ್ಯಾತನಹಳ್ಳಿಯಿಂದ ಬೈಕ್ ಮೇಲೆ ಹೊರಟಿದ್ದರು. ಈ ವೇಳೆ ಮರೂರು ಬಳಿಯ ಕೆರೆಬಳಿ ಮೂತ್ರ ವಿಸರ್ಜನೆ ನೆಪದಲ್ಲಿ ಬೈಕ್ ನಿಲ್ಲಿಸಿದ ನಿತೀಶನು ಕೆಳಗಿಳಿದು ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ನೀರಿನಲ್ಲಿ ಮುಳುಗುವುದನ್ನು ಕಂಡ ತಾಯಿ ಮಗಳ ರಕ್ಷಣೆಗೆ ನೀರಿಗೆ ಇಳಿದಾಗ ಅವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಆರೋಪಿ ನಿತೀಶನನ್ನು ಗ್ರಾಮಾಂತರ ಠಾಣಾ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಿಗ್ಗೆ ಅಗ್ನಿಶಾಮದ ದಳದ ಸಿಬ್ಬಂದಿಗಳು ಶವವನ್ನು ಮೇಲೆತ್ತಿದರು. ವಿಷಯ ತಿಳಿದ ನೂರಾರು ಗ್ರಾಮಸ್ಥರು ಕೆರೆ ಬಳಿ ಜಮಾಯಿಸಿದ್ದರು.