ಭೋರ್ಗರೆಯುತ್ತಿರುವ ಕೃಷ್ಣಾ ನದಿ: ನೆರೆ ಭೀತಿಯಲ್ಲಿ ರಬಕವಿ-ಬನಹಟ್ಟಿ

A B Dharwadkar
ಭೋರ್ಗರೆಯುತ್ತಿರುವ ಕೃಷ್ಣಾ ನದಿ: ನೆರೆ ಭೀತಿಯಲ್ಲಿ ರಬಕವಿ-ಬನಹಟ್ಟಿ

ಬಾಗಲಕೋಟ : ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಸಮೀಪದ ಹಿಪ್ಪರಗಿ ಜಲಾಶಯಕ್ಕೆ ಗುರುವಾರ ಬೆಳಿಗ್ಗೆ 7 ಗಂಟೆ ಹೊತ್ತಿಗೆ 168565 ಕ್ಯೂಸೆಕ್ಸ ಒಳ ಹರಿವು ಇದ್ದು, 167815 ಹೊರ ಹರಿವು ದಾಖಲಾಗಿದೆ.

ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಬನಹಟ್ಟಿ ಸಮೀಪದಲ್ಲಿ ಕೃಷ್ಣಾ ನದಿ ಭೋರ್ಗರೆಯುತ್ತಿದೆ. ಈ ಕಾರಣ ತಾಲೂಕಿನ ತಮದಡ್ಡಿ, ಹಳಿಂಗಳಿ, ಮದನಮಟ್ಟಿ, ಅಸ್ಕಿ,ಸೇರಿದಂತೆ ಕೃಷ್ಣಾ ತೀರದ ಅನೇಕ ಗ್ರಾಮಗಳ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಜಲಾಶಯದ ಹೊರ ಹರಿವು ಮುಕ್ತವಾಗಿದ್ದರೂ ಕೃಷ್ಣಾ ನದಿಯ ಒಳ ಹರಿವು ಏರಿಳಿತವಾಗುತ್ತಿದೆ. ಜಲಾಶಯದಲ್ಲಿ ನೀರು ಸಂಗ್ರಹಿಸದೇ ಬಂದಷ್ಟೇ ನೀರನ್ನು ಹೊರಹಾಕುತ್ತಿದ್ದು, ನದಿ ತೀರದ ಜನತೆ ಜಾಗೃತೆಯಲ್ಲಿರಬೇಕು. ಕೆಲ ಗ್ರಾಮಗಳ ನದಿ ತೀರ ಪ್ರದೇಶದ ನಿವಾಸಿಗಳು ತಮ್ಮ ಸರಂಜಾಮು, ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಸನ್ನದ್ಧರಾಗಿರಬೇಕು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ತಿಳಿಸಿದ್ದಾರೆ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾದಲ್ಲಿ 163 ಮಿ.ಮೀ, ನವುಜಾದಲ್ಲಿ 237 ಮಿ.ಮೀ ಮತ್ತು ಮಹಾಬಳೇಶ್ವರ ಪ್ರದೇಶದಲ್ಲಿ 307 ಮಿ.ಮೀ, ಮಳೆಯಾಗಿದೆ ಎಂದು ವರದಿಯಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.