ಚಿತ್ರದುರ್ಗ: ಸುರಿಯುತ್ತಿದ್ದ ಬಾರೀ ಮಳೆಯಲ್ಲಿಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರೂ ಸಹ ರಾಹುಲ್ ಗೆ ಜೊತೆ ಹೆಜ್ಜೆ ಹಾಕಿದರು.
ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿ ಭಾರತ ಜೋಡೋ ಪಾದಯಾತ್ರೆ ಸಾಗುತ್ತಿದ್ದಾಗ ಮಳೆ ಆರಂಭವಾಯಿತು. ಹುಳಿಯಾರು ವೃತ್ತ ದಾಟಿದ ಬಳಿಕ ಮಳೆಯ ಬಿರುಸು ಹೆಚ್ಚಾಯಿತು. ವೇದಾವತಿ ನದಿಯ ಸೇತುವೆಯ ಮೇಲೆ ಸಾಗುವಾಗ ಮಳೆ ಇನ್ನೂ ಹೆಚ್ಚಾಯಿತು.
ಆದರೆ ಸುರಿಯುವ ಮಳೆಯಲ್ಲೂ ರಾಹುಲ ಗಾಂಧಿಯವರು ಪಾದಾಯಾತ್ರೆ ನಿಲ್ಲಿಸಲಿಲ್ಲ, ಮಳೆಯಲ್ಲಿಯೇ ಹೆಜ್ಜೆ ಹಾಕಿದರು. ಅವರ ಜನರೂ ಸಹ ಹೆಜ್ಜೆ ಹಾಕಿದರು. ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಜನರು ಕೈಬೀಸಿ ಯಾತ್ರೆ ಬೆಂಬಲಿಸಿದರು. ಜೋಡೋ ಯಾತ್ರೆ ಮತ್ತು ರಾಹುಲ್ ಗಾಂಧಿ ಪರವಾಗಿ ಘೋಷಣೆ ಕೂಗಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಾಹನದಲ್ಲಿ ಮಳೆಯಿಂದ ಆಶ್ರಯ ಪಡೆದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೇವಾಲಾ ಅವರು ರಾಹುಲ್ ಜೊತೆಗೆ ಇದ್ದರು. ಈ ನಡುವೆ ಅಂಬೇಡ್ಕರ ವೃತ್ತದಲ್ಲಿರುವ ಅಂಬೇಡ್ಕರ ಪ್ರತಿಮೆಗೆ ರಾಹುಲ್ ಗಾಂಧಿ ಗೌರವ ಸಲ್ಲಿಸಿದರು.