ಗೋಕಾಕ, ೧೨- ಶುಕ್ರವಾರ ಸಂಜೆಯಿಂದ ಕಾಣೆಯಾಗಿದ್ದ ಗೋಕಾಕ ನಗರದ ಉದ್ಯಮಿ ರಾಜು ಉರ್ಫ ಮುನ್ನಾ ಝಂವರ ಅವರನ್ನು ಕೊಲೆ ಮಾಡಿ ಕೊಳವಿ ಗ್ರಾಮದ ಸಮೀಪ ಕೆನಾಲ್ ದಲ್ಲಿ ಎಸೆಯಲಾಗಿದೆ ಎನ್ನಲಾಗಿದೆ.
ಉದ್ಯಮಿ ರಾಜು ಉರ್ಫ ಮುನ್ನಾ ಝಂವರ ಅವರು ಶುಕ್ರವಾರ ಸಂಜೆ 6 ರ ಸುಮಾರಿಗೆ ನಗರದ ಸಿಟಿ ಹೆಲ್ತ್ ಕೇರ್ ವೈದ್ಯ ಸಚಿನ ಶಿರಗಾವಿ ಅವರ ಜೊತೆ ಸೇರಿ ಮಾತುಕತೆ ನಡೆಸಿದ ನಂತರ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಸಹಾ ಅದೇ ಸಮಯಕ್ಕೆ ಬಂದ್ ಆಗಿತ್ತು. ಈ ಬಗ್ಗೆ ರಾಜು ಅವರ ಕುಟುಂಬಸ್ಥರು ಗೋಕಾಕ ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ಪೊಲೀಸರು ತನಿಖೆ ನಡೆಸಿದಾಗ ರಾಜು ಅವರನ್ನು ಕೊಲೆ ಮಾಡಿ ಕೊಳವಿ ಕೆನಾಲ್ ಗೆ ಹಾಕಲಾಗಿದೆ ಎಂಬುದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ.
ಅವರ ಬೈಕ್ ಸಿಟಿ ಹೆಲ್ತ್ ಕೇರ್ ಬಳಿ ನಿಲ್ಲಿಸಿರುವುದು ಸಹ ಬೆಳಕಿಗೆ ಬಂದಿದೆ. ರಾಜು ಝಂವರ ಮತ್ತು ಸಚಿನ ಶಿರಗಾವಿ ನಡುವೆ ವ್ಯಾಪಾರ ವ್ಯವಹಾರ ನಡೆದಿತ್ತು. ಆಮೇಲೆ ಅದು ಕೋಟ್ಯಾಂತರ ರೂಪಾಯಿ ವ್ಯವಹಾರದವರೆಗೂ ವಿಸ್ತಾರಗೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವಿನ ಮನಸ್ತಾಪ ತೀವ್ರಗೊಂಡಿತ್ತು ಎನ್ನಲಾಗಿದೆ.
ಗೋಕಾಕ ಪೊಲೀಸರು ಎರಡು ದಿನಗಳಿಂದ ಎಲ್ಲಾ ಮೂಲಗಳಿಂದ ಮಾಹಿತಿ ಕಲೆಯಾಗುತ್ತಿದ್ದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಕೆನಾಲ್ ನೀರು ತಡೆ ಹಿಡಿದು ಮೃತದೇಹದ ಶೋಧನಾ ಕಾರ್ಯ ನಡೆಸಲಾಗಿದೆ.