ಗೋಕಾಕ, ೧೨- ಗೋಕಾಕದ ಖ್ಯಾತ ಬಂಗಾರದ ವ್ಯಾಪಾರಿ ರಾಜು ಝವರ ಅವರು ಬದುಕಿದ್ದಾರೋ ಇಲ್ಲವೋ ಈಗಲೇ ಹೇಳಲು ಆಗುವುದಿಲ್ಲ. ಪ್ರಕರಣ ಸಂಬಂಧ ವೈದ್ಯ ಡಾ. ಸಚಿನ ಶಿರಗಾವಿ ಸೇರಿದಂತೆ ಮೂವರನ್ನು ಸಂಶಯದ ಮೇಲೆ ವಶಕ್ಕೆ ಪಡೆಯಲಾಗಿದೆ ಎಂದು ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠ ಸಂಜೀವ ಪಾಟೀಲ ಮತ್ತು ಗೋಕಾಕ ಡಿಎಸ್ಪಿ ದಾದಾಪೀರ ಮುಲ್ಲಾ ಸಮದರ್ಶಿಗೆ ತಿಳಿಸಿದ್ದಾರೆ.
ಅವರ ಶವ ಸಿಗುವ ವರೆಗೆ ಅವರು ಬದುಕಿದ್ದಾರೋ ಅಥವಾ ಜೀವಂತ ಇದ್ದಾರೋ ಎಂಬುದನ್ನು ಹೇಳಲಾಗದು. ಈ ಘಟನೆಯ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ರಾಜು ಝವರ ಅವರನ್ನು ಕೊಲೆ ಮಾಡಿ ಕೊಳವಿ ಕೆನಾಲ್ಗೆ ಎಸೆದಿರುವುದಾಗಿ ಹೇಳಿದ್ದಾರೆ. ಮೃತದೇಹ ಸಿಗುವ ವರೆಗೆ ಯಾವುದೇ ನಿರ್ಣಯಕ್ಕೆ ಬರಲಾಗದು ಎಂದು ಅವರು ಸಮದರ್ಶಿಗೆ ವಿವರಿಸಿದರು.
ಕೆನಾಲ್ನಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ರವಿವಾರ ಸಂಜೆಯ ವರೆಗೆ ಶೋಧನಾ ಕಾರ್ಯ ನಡೆಸಿದರೂ ಶವ ಸಿಗಲಿಲ್ಲ. ಕತ್ತಲಾದ ಕಾರಣ ಕಾರ್ಯಾಚರಣೆ ನಿಲ್ಲಿಸಲಾಗಿದ್ದು ಸೋಮವಾರ ಬೆಳಿಗ್ಗೆಯಿಂದ ಮತ್ತೆ ಶೋಧನಾ ಕಾರ್ಯ ಕೈಗೊಳ್ಳಲಾಗುವುದು.