ಗೋಕಾಕ : ಇಲ್ಲಿಯ ಬಂಗಾರದ ವ್ಯಾಪಾರಿ ರಾಜು ಝವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ಷಾದ ಅಹ್ಮದ ತ್ರಾಸಗರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು ಬಂಧಿತರ ಸಂಖ್ಯೆ ಮೂರು ಆಗಿದೆ. ಈಗಾಗಲೇ ಕೊಲೆ ಆರೋಪಿಗಳಾದ ಡಾ.ಸಚಿನ್ ಪಾಟೀಲ ಮತ್ತು ಡಾ. ಶಿವಾನಂದ ಪಾಟೀಲ ಅವರನ್ನು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ.
ಬಂಧಿತ ಇರ್ಷಾದ ತ್ರಾಸಗರನ ಇನ್ನಿಬ್ಬರು ಸಹಚರರ ಶೋಧ ನಡೆದಿದೆ. ಈ ಮೂವರನ್ನು ಪ್ರಮುಖ ಆರೋಪಿ ಡಾ. ಸಚಿನ್ ಶಿರಗಾವಿಯು ಝವರ್ ಅವರನ್ನು ಹತ್ಯೆಗೈಯಲು ನೇಮಿಸಿದ್ದನೆಂದು ಹೇಳಲಾಗುತ್ತಿದೆ.
ಕೋರೋನಾ ಸಂದರ್ಭದಲ್ಲಿ ತನ್ನ ಉದ್ಯೋಗಕ್ಕೆ ಅನುಕೂಲವಾಗಲೆಂದು ಝವರ್ ಅವರಿಂದ ಡಾ. ಶಿರಗಾವಿ 1 ಕೋಟಿ 90 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಆದರೆ ಅದನ್ನು ಸಕಾಲಕ್ಕೆ ಹಿಂದಿರುದುಸದ ಕಾರಣ ಇಬ್ಬರಲ್ಲಿ ತೀವ್ರ ವೈಮನಸ್ಸು ಉಂಟಾಗಿತ್ತು. ಈ ವೈಷಮ್ಯ ವಿಕೋಪಕ್ಕೆ ಹೋಗಿ ಝವರ್ ಅವರನ್ನು ಮುಗಿಸಲು ನಿರ್ಧರಿಸಿ ತನಗೆ ಪರಿಚಯವಿದ್ದ ಇರ್ಷಾದ ಎಂಬವನನ್ನು ಸಂಪರ್ಕಿಸಿ ವ್ಯವಹಾರ ಕುದುರಿಸಿದ್ದಾನೆ.
ಝುವರ್ ಹತ್ಯೆಗೆ ಒಪ್ಪಿಕೊಂಡ ಇರ್ಷಾದನು ಒಂದು ಮೊತ್ತ ಗೊತ್ತು ಮಾಡಿದ್ದ ಎನ್ನಲಾಗಿದೆ. ಅದಕ್ಕೆ ಡಾ. ಶಿರಗಾವಿ ಒಪ್ಪಿಕೊಂಡಿದ್ದ. ವ್ಯವಹಾರ ಒಪ್ಪಿಗೆಯಾದ ಮೇಲೆ ತನ್ನ ಇಬ್ಬರು ಸಹಚರರೊಂದಿಗೆ ಡಾ. ಶಿರಗಾವಿ ಹೇಳಿದಂತೆ ಝವರ್ ಅವರನ್ನು ಚಾಕುವಿನಿಂದ ಕುತ್ತಿಗೆ ಕತ್ತರಿಸಿ, ದೇಹದ ಕೆಲ ಭಾಗಗಳಿಗೆ ಇರಿದು ಹತ್ಯೆ ಮಾಡಿದ್ದರು.
ಕಳೆದ ಫೆಬ್ರವರಿ 10 ರಂದು ರಾತ್ರಿ ಸುಮಾರು 11 ಗಂಟೆಗೆ ಝುವರ ಅವರನ್ನು ಡಾ. ಶಿರಗಾವಿಯು ತನ್ನ ಕಾರಿನಲ್ಲಿ ಮಾರ್ಕಂಡೇಯ ನದಿ ತೀರದಲ್ಲಿರುವ ಯೋಗಿಕೊಳ್ಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಅವರೊಂದಿಗೆ ಅವರ ಸಹಪಾಠಿಯಾದ ಡಾ. ಶಿವಾನಂದ ಪಾಟೀಲ ಕೂಡ ಇದ್ದರು. ಯೋಗಿಕೊಳ್ಳದ ಬಳಿ ನಿಯೋಜಿಸಿದ್ದ ಸಂಚಿನಂತೆ ಇರ್ಷಾದ ಮತ್ತು ಇಬ್ಬರು ಸುಪಾರಿ ಹಂತಕರ ಕಾಯುತ್ತಿದ್ದರು. ಅಲ್ಲಿಗೆ ತಲುಪಿದ ನಂತರ ಡಾ. ಶಿರಗಾವಿಯವರ ಕಾರಿನಲ್ಲಿಯೇ ಇರ್ಷಾದ ಮತ್ತು ಅವನ ಸಹಚರರು ಹತ್ಯೆ ಮಾಡಿ ಶವವನ್ನು ತೆಗೆದುಕೊಂಡು ಹೋಗಿ ಕೊಳವಿ ಬಳಿ ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಎಸೆದಿದ್ದರು.
ಝವರ್ ಅವರ ಶವ ಆರು ದಿನಗಳ ನಂತರ ಅಂದರೆ ಗುರುವಾರ ರಾತ್ರಿ ಘಟನೆ ನಡೆದ ಸ್ಥಳದಿಂದ 37 ಕಿಮಿ ಅಂತರದಲ್ಲಿರುವ ಪಂಚನಾಯ್ಕನಹಟ್ಟಿ ಸಮೀಪ ಕಾಲುವೆಯ ಒಂದು ಪೈಪ್ ನಲ್ಲಿ ಪತ್ತೆಯಾಗಿದೆ. ಝವರ್ ಅವರ ಪತ್ತೆಗೆ ಹಿರಿಯ ಅಧಿಕಾರಿಗಳು ಸೇರಿದಂತೆ 350 ಪೊಲೀಸರು ಕಾರ್ಯ ನಿರ್ವಹಿಸಿದ್ದರು.
ಹತ್ಯೆ ನಡೆದ ಯೋಗಿಕೊಳ್ಳದ ಬಳಿ ಝವರ್ ಅವರ ಕನ್ನಡಕ, ಪೆನ್ ಮತ್ತು ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವುಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಒದಗಿಸಲಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಹತ್ಯೆಯ ಪ್ರಥಮ ಆರೋಪಿಯಾಗಿರುವ ಡಾ. ಶಿರಗಾವಿ ತಾವು ಮಾಡಿದ್ದ ಕೊಲೆಯನ್ನು ಒಪ್ಪಿಕೊಂಡಿದ್ದಾರೆ.