ಬೆಳಗಾವಿ, ೩೧ (ಸಮದರ್ಶಿ ಸುದ್ದಿ) : ಮೈಸೂರು ರಾಜ್ಯವು ೧೯೭೩ ರಲ್ಲಿ “ಕರ್ನಾಟಕ“ಎಂದು ನಾಮಕರಣಗೊಂಡ ನಂತರ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಕರ್ನಾಟಕ ರಾಜ್ಯೋತ್ಸವ ಹಬ್ಬಕ್ಕಾಗಿ ಹಿಂದೆಂದೂ ಕಂಡಿರದಂತೆ ಬೆಳಗಾವಿ ನಗರ ನವವಧುವಿನಂತೆ ಶೃಂಗಾರಗೊಂಡಿದೆ. ನಗರದ ಪ್ರಮುಖ ಸ್ಥಳಗಳು, ಬೃಹತ್ ಕಟ್ಟಡಗಳು, ರಸ್ತೆಗಳನ್ನು ಆಕರ್ಷಕ ದೀಪಗಳಿಂದ, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ರಾಜ್ಯೋತ್ಸವದ ಕೇಂದ್ರ ಸ್ಥಳವಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಅಲಂಕಾರದಿಂದ ಅದ್ದೂರಿಯಾಗಿ ಕಂಗೊಳಿಸುತ್ತಿದೆ. ಬೆಳಗಾವಿಯ ರಾಜ್ಯೋತ್ಸವದ ಮೆರವಣಿಗೆ ರಾಜ್ಯದಲ್ಲೇ ಖ್ಯಾತಿ ಪಡೆದಿದೆ. ಕಳೆದ ವರ್ಷ ಸುಮಾರು ಮೂರು ಲಕ್ಷ ಜನ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಎಂದು ರಾಜ್ಯ ಮತ್ತು ಕೇಂದ್ರ ಗುಪ್ತದಳ ವರದಿ ಮಾಡಿದ್ದು, ಈ ವರುಷ ಅದಕ್ಕಿಂತಲೂ ಹೆಚ್ಚು ಜನ ಅಂದರೆ ೩ರಿಂದ ೫ ಲಕ್ಷ ಜನ ಸೇರುವ ಕುರಿತು ಅಂದಾಜು ಇದೆ.
ಜಿಲ್ಲಾಡಳಿತ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆಗೆ ಸಕಲ ಏರ್ಪಾಡು ಮಾಡಿಕೊಂಡಿದ್ದು ಶಿಕ್ಷಣ ಇಲಾಖೆಯು ಎಲ್ಲಾ ಭಾಷೆಯ ಶಾಲೆ, ಕಾಲೇಜುಗಳೂ ಕಡ್ಡಾಯವಾಗಿ ರಾಜ್ಯೋತ್ಸವ ಆಚರಿಸಬೇಕು ಮತ್ತು ಅದರ ಕುರಿತು ವಿಡಿಯೋ ಮತ್ತು ಫೋಟೋಗಳನ್ನು ಇಲಾಖೆಗೆ ಕಳುಹಿಸಬೇಕೆಂದು ಆದೇಶಿಸಿದೆ.
ನಾಡದ್ರೋಹಿ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಈಎಸ್) ಪ್ರತಿ ವರುಷದಂತೆ ಈ ವರುಷವೂ ರಾಜ್ಯೋತ್ಸವ ದಿನವನ್ನು ‘ಕರಾಳ ದಿನ, ಕಪ್ಪು ದಿನ’ ವೆಂದು ಆಚರಿಸಲು ಮರಾಠಿಗರಿಗೆ ಕರೆ ನೀಡಿ, ಮೆರವಣಿಗೆ ಮತ್ತು ಬಹಿರಂಗ ಸಭೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳಿಗೆ ಅನುಮತಿ ಕೋರಿದೆ. ಆದರೆ ಈ ವರೆಗೂ ಎರಡೂ ಇಲಾಖೆಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಈ ನಡುವೆ “ನಾವು ನಿಮ್ಮೊಂದಿಗಿದ್ದೇವೆ” ಎಂಬುವುದನ್ನು ಸಾಬೀತುಪಡಿಸಲು ಮಹಾರಾಷ್ಟ್ರ ಸರಕಾರ ತನ್ನ ಓರ್ವ ಪ್ರತಿನಿಧಿಯನ್ನು ಬೆಳಗಾವಿಯ ನಾಡ ವಿರೋಧಿ ‘ಕಪ್ಪು ದಿನಾಚರಣೆ’ ಗೆ ಕಳುಹಿಸಿಕೊಡುವ ಭರವಸೆ ನೀಡಿದೆ. ಕಳೆದ ರವಿವಾರ ಕೊಲ್ಹಾಪುರದ ಕನೇರಿಮಠದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ತಮ್ಮ ಸಚಿವ ಸಂಪುಟದ ಪ್ರತಿನಿಧಿಯೊಬ್ಬರನ್ನು ಕಳುಹಿಸಿ ಕೊಡುವುದಾಗಿ ತಿಳಿಸಿದ್ದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ಶಹಾಪುರಿನ ಶಿವಾಜಿ ಉದ್ಯಾನವನದಿಂದ ಬಸವೇಶ್ವರ ಸರ್ಕಲ್ (ಗೋವಾ ವೇಸ್ ) ಸಮೀಪದ ಮರಾಠಾ ಮಂದಿರದ ವರೆಗೂ ಮೆರವಣಿಗೆ ನಡೆಸಿ ನಂತರ ಅಲ್ಲಿ ಬಹಿರಂಗ ಸಭೆ ಏರ್ಪಡಿಸಲು ಅನುಮತಿ ಕೋರಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಪುರುಷರು ಮಹಿಳೆಯರು ಕಪ್ಪು ಉಡುಪು ಧರಿಸಿ ಆಗಮಿಸಲು ಸೂಚಿಸಿದೆ.
ಸಮಿತಿಯ ಈ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದೆಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಸಂಚಾಲಕ ಅಶೋಕ ಚಂದರಗಿ ಸರಕಾರಕ್ಕೆ ಪತ್ರ ಬರೆದು, ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ಪ್ರತಿನಿಧಿ ಹಾಗೂ ಅಲ್ಲಿನ ಜನರು ಸಮಿತಿಯ ‘ಕರಾಳ ದಿನಾಚರಣೆ’ಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.
“ಕಪ್ಪು ದಿನ ಆಚರಣೆಗೆ ನಮಗೆ ಯಾರ ಅನುಮತಿಯ ಅಗತ್ಯವಿಲ್ಲ. ಸರಕಾರ ಅನುಮತಿ ನೀಡದಿದ್ದರೂ ನಾವು ರಾಜ್ಯೋತ್ಸವ ಧಿಕ್ಕರಿಸುತ್ತೇವೆ. ಯಾವುದೇ ಶಕ್ತಿ ನಮ್ಮನ್ನು ತಡೆಯಲಾರದು” ಎಂದು ಎಂಇಎಸ್ ಮಾಧ್ಯಮ ವಕ್ತಾರ ವಿಕಾಸ ಕಲಘಟಗಿ ಸಮದರ್ಶಿಗೆ ತಿಳಿಸಿದರು. ಪ್ರತಿಭಟಿಸುವುದು ಪ್ರತಿಯೊಬ್ಬರ ಹಕ್ಕು ಅದನ್ನು ಹತ್ತಿಕ್ಕಲು, ದಮನ ಮಾಡಲು ಯಾರಿಗೂ ಹಕ್ಕಿಲ್ಲ. ಮಹಾರಾಷ್ಟ್ರದಿಂದ ಜನ, ಪ್ರತಿನಿಧಿಗಳು ಬರಲಿ ಬಿಡಲಿ ನಾವು ಬೆಳಗಾವಿ ಮತ್ತು ಕರ್ನಾಟಕದಲ್ಲಿರುವ ಇತರ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ಸೇರಿಸದಿರುವ ಕುರಿತು ನಮ್ಮ ‘ಧಿಕ್ಕಾರ’ ಸೂಚಿಸಲು ‘ಕರಾಳದಿನ’ ಆಚರಿಸಿಯೇ ತೀರುತ್ತೇವೆ ಎಂದು ಕಲಘಟಗಿ ತಿಳಿಸಿದರು.
‘ಕಪ್ಪ ದಿನ’ ಆಚರಣೆಗೆ ಮಹಾರಾಷ್ಟ್ರದಿಂದ ಬರುವವರನ್ನು, ಸರಕಾರದ ಪ್ರತಿನಿಧಿಯನ್ನು ತಡೆಯಲು ಬೆಳಗಾವಿ ಜಿಲ್ಲಾಡಳಿತ ಆ ರಾಜ್ಯದಿಂದ ಜಿಲ್ಲೆಗೆ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ಮಂಗಳವಾರದಿಂದಲೇ ತಪಾಸಣೆ ನಡೆಸಿದೆ. ಬೆಳಗಾವಿ ನಗರ ಮತ್ತು ಜಿಲ್ಲೆಯ ರಾಜ್ಯದ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ನೂರಕ್ಕೂ ಹೆಚ್ಚು ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾ ಮೂಲಕ ಮಂಗಳವಾರ ಮಧ್ಯಾಹ್ನದಿಂದಲೇ ಕಣ್ಗಾವಲು ಇಡಲಾಗಿದೆ.