ಲಖನೌ: ಜನವರಿ 14, 2024ರ ಮಕರಸಂಕ್ರಾಂತಿಯಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ ಹೇಳಿದೆ.
ಅದೇ ವರ್ಷ ಲೋಕಸಭೆಯ ಮಹಾಚುನಾವಣೆ ನಡೆಯಬೇಕಿದೆ. 2024 ರ ಮಕರ ಸಂಕ್ರಾಂತಿ ದಿನದಂದು ರಾಮ ಮತ್ತು ಅವರ ಸಹೋದರರ ವಿಗ್ರಹಗಳನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ದೇವಾಲಯದ ಪ್ರಧಾನ ಕಾರ್ಯದರ್ಶಿ ಚಂಪತ ರೈ ತಿಳಿಸಿದ್ದಾರೆ.
ಮೂರು ಅಂತಸ್ತಿನ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ನೆಲ ಮಹಡಿಯನ್ನು ಡಿಸೆಂಬರ್ 2023 ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಚಂಪತ್ ರೈ ಹೇಳಿದರು.
ಅಯೋಧ್ಯೆಯ ಸರ್ಕ್ಯೂಟ್ ಹೌಸ್‌ನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ನೇತೃತ್ವದ ದೇವಾಲಯ ನಿರ್ಮಾಣ ಸಮಿತಿಯೊಂದಿಗೆ ಸಭೆ ನಡೆಸಿದ ನಂತರ ಚಂಪತ್ ರೈ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಚರ್ಚೆಯ ನಂತರ ದೇವಾಲಯ ನಿರ್ಮಾಣದ ವೆಚ್ಚವನ್ನು 1800 ಕೋಟಿ ರೂಪಾಯಿಗೆ ಪರಿಷ್ಕರಿಸಲಾಗಿದೆ, ವೆಚ್ಚವು ಇನ್ನೂ ಹೆಚ್ಚಾಗಬಹುದು ಎಂದು ಅವರು ತಿಳಿಸಿದರು.
ಈ ಹಿಂದೆ ದೇವಾಲಯದ ವೆಚ್ಚ ಸುಮಾರು 400 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು.