ಚಂಡಿಗಡ, 21: ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮತ್ತು ಪತ್ರಕರ್ತರೊಬ್ಬರ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ ರಾಮ ರಹೀಮ ಮತ್ತೆ ಜೈಲಿನಿಂದ ಹೊರಬಂದಿದ್ದಾನೆ. ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ ರಾಮ ರಹೀಮ ಸಿಂಗ್ ಗೆ ಮತ್ತೆ 21 ದಿನಗಳ ಪರೋಲ್ ನೀಡಲಾಗಿದೆ!
ರೆಹ್ತಕ್ನ ಸುನಾರಿಯಾ ಜೈಲಿನಲ್ಲಿರುವ ಗುರ್ಮೀತ ರಾಮ ರಹೀಮ 2017 ರಲ್ಲಿ ಶಿಕ್ಷೆಯಾದ ನಂತರ ಒಟ್ಟು 7 ಬಾರಿ ಜೈಲಿನಿಂದ ಹೊರ ಬಂದಿದ್ದಾರೆ!. ಈ ವರ್ಷ ಅವರ ಹುಟ್ಟುಹಬ್ಬದ ಮೊದಲು, ಅವರು ಜುಲೈ 20 ರಂದು ಪೆರೋಲ್ ನೀಡಿ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ನಂತರ ಮತ್ತೆ ಅವರು 30 ದಿನಗಳ ವರೆಗೆ ಹೊರಬಂದರು. ರಾಮ ರಹೀಮ ಉತ್ತರ ಪ್ರದೇಶದ ಬಾಗಪತ್ ನಲ್ಲಿರುವ ತನ್ನ ಆಶ್ರಮದಲ್ಲಿ ಉಳಿಯುತ್ತಾನೆ.
ತನ್ನ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಅಪರಾಧಿ ರಾಮ ರಹೀಮಗೆ 20 ವರ್ಷಗಳ ಜೈಲು ಶಿಕ್ಷೆಯನ್ನು 28 ಅಗಸ್ಟ 2017 ರಂದು ವಿಧಿಸಲಾಯಿತು. ನಂತರ ಜನವರಿ 17, 2019 ರಂದು ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಮಾಡಿದ್ದಕ್ಕೆ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
ಪರೋಲ್ ಒಂದು ರೀತಿಯ ರಜೆ, ಇದರಲ್ಲಿ ಶಿಕ್ಷೆಗೊಳಗಾದ ಕೈದಿಯನ್ನು ಕೆಲವು ದಿನಗಳವರೆಗೆ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಹಕ್ಕು ದೀರ್ಘಾವಧಿ ಶಿಕ್ಷೆಗೆ ಒಳಗಾದ ಕೈದಿಗಳಿಗೆ ಸಿಗುತ್ತದೆ. ಕೈದಿಗಳು ಅವರ ಕುಟುಂಬ ಮತ್ತು ಸಮಾಜವನ್ನು ಭೇಟಿಯಾಗಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಆದರೆ ಪ್ರತಿ ರಾಜ್ಯವು ಪರೋಲ್ಗೆ ಸಂಬಂಧಿಸಿದಂತೆ ವಿಭಿನ್ನ ನಿಬಂಧನೆಗಳನ್ನು ಹೊಂದಿದೆ. ಅಪರಾಧಗಳು ಹೆಚ್ಚಿರುವ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಪರೋಲ್ ನೀಡಲು ಯಾವುದೇ ನಿಯಮವಿಲ್ಲ.
ಜನವರಿಯಲ್ಲಿ ರಾಮ ರಹೀಮ್ಗೆ 40 ದಿನಗಳ ಪೆರೋಲ್ ನೀಡಿದ ವಿವಾದದ ನಂತರ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ ಅವರು ಪೆರೋಲ್ ಪಡೆಯುವುದು ಡೇರಾ ಸಚ್ಚಾ ಸೌದಾ ಮುಖ್ಯಸ್ಥರ ಹಕ್ಕು ಎಂದು ಹೇಳಿದ್ದರು. ಇದೇ ಪೆರೋಲ್ ಅವಧಿಯಲ್ಲಿ ರಾಮ್ ರಹೀಮ್ ಕತ್ತಿಯಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಕಂಡುಬಂತು.
ಹಿಂದಿನ ಸಂದರ್ಭಗಳಲ್ಲಿ ಪೆರೋಲ್ನಲ್ಲಿ ಹೊರಗಿರುವಾಗ, ಸಿರ್ಸಾ-ಪ್ರಧಾನ ಪಂಥದ ಮುಖ್ಯಸ್ಥರು ಹಲವಾರು ಆನ್ಲೈನ್ “ಸತ್ಸಂಗ” ಗಳನ್ನು ನಡೆಸಿದ್ದರು.
ದೇಶದಲ್ಲಿ ಕೋಟ್ಯಾಂತರ ಪ್ರಕರಣಗಳು ಕೋರ್ಟ ಮುಂದೆ ವಿಚಾರಣೆಗೆ ಸಹ ಬರದೇ ಲಕ್ಷಾಂತರ ಜನರು ಜೈಲಿನಲ್ಲಿ ಕೊಳೆಯುತ್ತಿದ್ದರೂ ಇಂಥ ಘೋರ ಅಪರಾಧ ಎಸಗಿದವರೊಂದಿಗೆ ಮೃದು ಧೋರಣೆ ತಳೆಯುತ್ತಿರುವುದರಿಂದಲೇ ದೇಶದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಜನರಾಡುವ ಮಾತಿನತ್ತ ಕಾನೂನು ಪಾಲಕರು ಗಮನಹರಿಸಬೇಕಿದೆ.