ಯರಗಟ್ಟಿ : ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಲಾರಿ ಹಿಂಬದಿ ಹಗ್ಗ ಕಟ್ಟುತ್ತಿದ್ದ ಲಾರಿ ಚಾಲಕ, ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30) ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ನಡೆದಿದೆ.
ಯರಗಟ್ಟಿಯ ಬೀರೇಶ್ವರ ಬ್ಯಾಂಕ್ ಎದುರಿನ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಬೆಳಗಾವಿಗೆ ಹೊರಟ್ಟಿದ್ದ ಕಾರು ವೇಗವಾಗಿ ಗುದ್ದಿದೆ. ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನು ಕಾರಿನಲ್ಲಿದ್ದ ಅಮರೆಗೌಡ ಮಾಲಿಪಾಟೀಲ (58) ಗೌಡಪ್ಪಗೌಡ ಮಾಲಿಪಾಟೀಲ (25) ಗಾಯಗೊಂಡಿದ್ದು, ವೀರಭದ್ರಗೌಡ ಡಬಿ (32), ಹನುಮಂತ ಬೆಟಗೇರಿ (23) ಸಣ್ಣಪುಟ್ಟ ಗಾಯಗಳಾಗಿವೆ. ಇವರೆಲ್ಲ ರಾಯಚೂರ ಜಿಲ್ಲೆಯ ಸಿಂಧನೂರು ಪಟ್ಟಣದವರಾಗಿದ್ದಾರೆ.
ಗಾಯಾಳುಗಳನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಯರಗಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.