ಬೆಳಗಾವಿ, ೫: ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಪೃಥ್ವಿ ಸಿಂಗ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ಗಂಭೀರವಾಗಿದ್ದು ಈ ವಿಷಯವನ್ನು ದೆಹಲಿಗೆ ತೆಗೆದುಕೊಂಡು ಹೋಗುವುದಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
“ಪೊಲೀಸರು ತನಿಖೆ ಸರಿಯಾಗಿ ಮಾಡದಿದ್ದರೆ ಸಿಬಿಐ, ಹೈಕೋರ್ಟಗೆ ಹೋಗುತ್ತೇವೆ. ಬೆಂಗಳೂರಿನ ದೊಡ್ಡ ಅಧಿಕಾರಿ ಮೂಲಕ ಯಾವುದೇ ಕಾರಣಕ್ಕೂ ಎಫ್‌ಐಆರ್ ಮಾಡದಂತೆ ಆದೇಶ ಮಾಡಿದ್ದಾರೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ದಿಲ್ಲಿಯಲ್ಲಿ ಮಾತಾಡುತ್ತೇವೆ” ಎಂದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಡಿಕೆ ಶಿವಕುಮಾರ ವಿರುದ್ದ ಆರೋಪ ಮಾಡಿದರು. “ರಾಜ್ಯದಲ್ಲಿ ಮಹಾನ್ ನಾಯಕರು, ಕೊತ್ವಾಲ್ ರಾಮಚಂದ್ರ ಶಿಷ್ಯರು ಅಧಿಕಾರದಲ್ಲಿದ್ದಾಗ ಹೇಗೆ ನ್ಯಾಯ ಸಿಗುತ್ತದೆ. ಪೊಲೀಸರು ಎಫ್ಐಆರ್ ಮಾಡುವುದೇ ಅನುಮಾನ. ಈಗಾಗಲೇ ದೂರು ಕೊಟ್ಟಿದ್ದಾರೆ. ಆದರೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಹೈದರಾಬಾದನಲ್ಲಿ ಕುಳಿತು ಬಹಳಷ್ಟು ಒತ್ತಡ ಮಾಡುತ್ತಿದ್ದಾರೆ. ಎಡಿಜಿಪಿ ಅಧಿಕಾರಿ ಮೂಲಕ ಸ್ಥಳೀಯ ಪೊಲೀಸರಿಗೆ ಬಹಳಷ್ಟು ಒತ್ತಡ ಬಂದಿದೆ. ಅದೇ ಕಾರಣಕ್ಕೆ ಎಫ್ಐಆರ್ ಮಾಡುತ್ತಿಲ್ಲ ಎಂದು ದೂರಿದರು.
ಪೃಥ್ವಿ ಸಿಂಗ್ ಗೆ ಚುನಾವಣೆ ವೇಳೆ ಜೀವ ಬೆದರಿಕೆ ಬಂದಿದ್ದ ವಿಷಯದ ಬಗ್ಗೆ ಮಾತನಾಡಿದ ಅವರು, ನನಗೂ ಜೀವ ಬೆದರಿಕೆ ಬರುತ್ತವೆ. ಅದೆಲ್ಲವನ್ನೂ ನಾವು ಹೇಳಿಕೊಳ್ಳುವುದಿಲ್ಲ. ರವಿ ಪೂಜಾರಿಯಿಂದ ನನಗೆ ಬೆದರಿಕೆ ಕರೆ ಬಂದಿತ್ತು, ಆದರೆ ನಾನು ದೂರು ಕೊಡಲಿಲ್ಲ. ಕೊಲೆ ಮಟ್ಟಕ್ಕೆ ಹೋಗಿದ್ದಕ್ಕೆ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಸಿಸಿಟಿವಿಯಲ್ಲಿ ಆ ಮನುಷ್ಯ ಹೋಗುವುದನ್ನು ನೋಡಿದ್ದೇನೆ. ಸಿಬಿಐಗೆ ಕೊಟ್ಟಿದ್ದ ತನಿಖೆಯನ್ನೇ ಈ ಸರ್ಕಾರ ಹಿಂದಕ್ಕೆ ಪಡೆಯುತ್ತದೆ. ಈ ಸರ್ಕಾರಕ್ಕೆ ನೈತಿಕತೆಯೇ ಇಲ್ಲ, ಇಂಥ ಸರ್ಕಾರದಿಂದ ನ್ಯಾಯ ಸಿಗುವುದಿಲ್ಲ ಎಂದು ಜಾರಕಿಹೊಳಿ ಹೇಳಿದರು.
ಪೃಥ್ವಿರಾಜ ಓರ್ವ ನಟೋರಿಯಸ್ ಎಂಬ ಚನ್ನರಾಜ ಹಟ್ಟಿಹೊಳಿ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರು ನಡೆದು ಬಂದ ದಾರಿಯನ್ನು ಬೆಳಗಾವಿಯ ಜನ ನೋಡಿದ್ದಾರೆ. ಅವರು ಯಾರು ಏನು ಎಂದು ಎಲ್ಲರೂ ನೋಡಿದ್ದಾರೆ ಎಂದು ತಿರುಗೇಟು ನೀಡಿದರು.
ಪೃಥ್ವಿಸಿಂಗ್ ಹಿಂದೆ ಯಾರೋ ಹೇಳಿ ಮಾಡಿಸಿದ್ದಾರೆ ಎಂಬ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪೃಥ್ವಿಸಿಂಗ್ ನನ್ನ ಶಿಷ್ಯ ಇರಬಹುದು, ಇಂತಹ ಚಿಲ್ಲರೆ ರಾಜಕಾರಣ ಜಾರಕಿಹೊಳಿ ಕುಟುಂಬ ಮಾಡುವುದಿಲ್ಲ. ಲಾಟರಿ ಮಂತ್ರಿ, ಲಾಟರಿ ಎಂಎಲ್ಎ ಕೆಲವೇ ದಿನಗಳಲ್ಲಿ ಅವರು ಮಾಜಿ ಆಗುತ್ತಾರೆ. ಇಲ್ಲಿ ನ್ಯಾಯ ಸಿಗುವುದು ಕಷ್ಟ, ನಾವು ಸಿಬಿಐ ತನಿಖೆಗೆ ಹೋಗುತ್ತೇವೆ. ಪೃಥ್ವಿ ಸಿಂಗ್ ತಪ್ಪಿದ್ದರೆ ಅವನಿಗೂ ಬೈಯ್ದು ಹೇಳುತ್ತೇನೆ. ನಾನು ನ್ಯಾಯದ ಪರವಾಗಿ ಇರುವದಾಗಿ ತಿಳಿಸಿದರು.
ಗ್ರಾಮೀಣ ಕ್ಷೇತ್ರದಲ್ಲಿ ಲ್ಯಾಂಡ್ ಮಾಫಿಯಾ ನಡೆದಿದೆ. ಪಾರಿಶ್ವಾಡ ಗ್ರಾಮದಲ್ಲಿ ಹೆಣ್ಣು ಮಕ್ಕಳು ಗೂಂಡಾಗಿರಿ ಮಾಡುತ್ತಿದ್ದಾರೆ. ಬೇಲಿ ಹಾಕುವುದು ರೋಡ್ ಬಂದ್ ಮಾಡುವುದು ಆಗುತ್ತಿದೆ. ಬೆಳಗಾವಿ ಕನಕಪುರ ಆಗುತ್ತಿದೆ ಎಂದು ರಮೇಶ ಜಾರಕಿಹೊಳಿ ಆರೋಪ ಮಾಡಿದರು.
ಗೋಕಾಕದಲ್ಲಿ ನಾನು ಒಂದೇ ಜಾಗ ಖರೀದಿ ಮಾಡಿದ್ದರೆ ರಾಜಕೀಯ ನಿವೃತ್ತಿಯಾಗುತ್ತೇನೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಅನ್ಯಾಯವಾಗಿದ್ದರೆ ಅವರ ಬೆನ್ನಿಗೆ ಇರುತ್ತೇನೆ ಎಂದು ಶಾಸಕರು ಹೇಳಿದರು.