ಬೆಳಗಾವಿ : ಜೆಡಿಎಸ್–ಕಾಂಗ್ರೆಸ್ ಸರಕಾರ ಪತನಗೊಳಿಸಿ ಬಿಜೆಪಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಪಕ್ಷದ ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಹಿಡಿತವನ್ನು ಮತ್ತೊಮ್ಮೆ ಸಾಬೀತು ಪಡೆಸಿದ್ದಾರೆ. ಪಕ್ಷ ಅವರು ಸೂಚಿಸಿದ ಎಲ್ಲ ಐದೂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.
ಅಥಣಿಯಿಂದ ಶಾಸಕ ಮಹೇಶ ಕುಮಟೊಳ್ಳಿ, ಬೆಳಗಾವಿ ಗ್ರಾಮೀಣದಿಂದ ನಾಗೇಶ ಮನ್ನೋಳಕರ, ಖಾನಾಪುರದಿಂದ ವಿಠ್ಠಲ ಹಲಗೇಕರ, ರಾಮದುರ್ಗದಿಂದ ಚಿಕ್ಕ ರೇವಣ್ಣ ಮತ್ತು ಬೈಲಹೊಂಗಲದಿಂದ ಬಿಜೆಪಿಯ ಮಾಜಿ ಶಾಸಕ ಜಗದೀಶ ಮೆಟಗುಡ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಥಣಿ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿ ಕಳೆದ ಸಲ ಸೋತಿದ್ದ ಲಕ್ಷ್ಮಣ ಸವದಿ ಅವರು ಈ ಬಾರಿ ಅಲ್ಲಿಂದ ಪುನ ಸ್ಪರ್ಧಿಸಲು ಬಯಸಿ ಪ್ರಯತ್ನಿಸಿದ್ದರು. ಆದರೆ ಮಹೇಶ ಕುಮಟೊಳ್ಳಿಗೆ ಟಿಕೆಟ್ ನೀಡದಿದ್ದರೆ ತಾವು ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ರಮೇಶ ಬೆದರಿಕೆ ಹಾಕಿದ್ದರು. ರಮೇಶ ಜಾರಕಿಹೊಳಿ ಕಾಗವಾಡ ಮತಕ್ಷೇತ್ರದ ಶ್ರೀಮಂತ ಪಾಟೀಲ ಅವರಿಗೂ ಟಿಕೆಟ್ ದೊರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಾಟೀಲ ಅವರ ಕೆಲಸ ತೃಪ್ತಿದಾಯಕ ಇರದ ಕಾರಣ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇರಲಿಲ್ಲ. ಆದರೆ 2019 ರಲ್ಲಿ ಜರುಗಿದ ‘ಆಪರೇಷನ್ ಕಮಲ‘ ಕ್ಕೆ ಅವರೂ ಸೇರಿದ್ದರಿಂದ ಜಾರಕಿಹೊಳಿ ಪಟ್ಟು ಹಿಡಿದು ಅವರಿಗೂ ಟಿಕೆಟ್ ಕೊಡಿಸಿ ಜಿಲ್ಲೆಯ ಮುಕ್ಕಾಲು ಪಾಲು ಬಿಜೆಪಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ.
ಕಾಂಗ್ರೆಸ್ ನಲ್ಲಿದಾಗ ಜಿಲ್ಲೆಯ ಏಳು ಶಾಸಕರಲ್ಲಿ ಕೇವಲ ಇಬ್ಬರ ಮೇಲೆ ಹಿಡಿತ ಹೊಂದಿದ್ದ ರಮೇಶ ಜಾರಕಿಹೊಳಿ ಈಗ ಐದೂ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಅವರನ್ನು ಗೆಲ್ಲಿಸಿಕೊಂಡು ಬರುವ ವಾಗ್ದಾನವನ್ನು ಪಕ್ಷದ ವರಿಷ್ಠರಿಗೆ ಮಾಡಿದ್ದಾರೆ.