ಬೆಳಗಾವಿ : ಬೆಳಗಾವಿ ಉತ್ತರ ಮತ್ತು ದಕ್ಷಿಣ ಬಿಜೆಪಿ ಶಾಸಕರ ಅಧಿಕಾರದಾಸೆಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಆಯ್ಕೆಯಾದ 58 ಸದಸ್ಯರು ಒಂದು ವರ್ಷವಾದರೂ ಇನ್ನೂ ಅಧಿಕಾರ ಪಡೆದುಕೊಂಡಿಲ್ಲವೆಂದು ಕಾಂಗ್ರೆಸ್ ನ ಬೆಳಗಾವಿಯ ಮಾಜಿ ಶಾಸಕ ರಮೇಶ ಕುಡಚಿ ಆರೋಪಿಸಿದರು.
ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯ ಸದಸ್ಯರೂ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಮತ್ತು ದಕ್ಷಿಣ ಶಾಸಕ ಅಭಯ ಪಾಟೀಲ್ ವಿರುದ್ಧ ಅಸಮಾಧಾನ ಬೇಸರ ಹೊಂದಿದ್ದಾರೆ.
ಇನ್ನೂ ಒಂದು ವಾರಕ್ಕೆ ಸದಸ್ಯರೆಲ್ಲ ಆಯ್ಕೆಯಾಗಿ ಒಂದು ವರ್ಷವಾಗುತ್ತದೆ. ಸದಸ್ಯರಿಗೆ ಅಧಿಕಾರಕೊಟ್ಟರೆ ತಮ್ಮ ಪ್ರಭಾವ ವರ್ಚಸ್ಸು ಪಾಲಿಕೆಯಲ್ಲಿ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಅವರು ಒಂದಿಲ್ಲೊಂದು ಕಾರಣ ನೀಡಿ ಮುಂದಕ್ಕೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯೊಂದಿಗೆ ರಾಜ್ಯದ ಇತರ ಮಹಾನಗರ ಪಾಲಿಕೆಯ ಚುನಾವಣೆಗಳೂ ನಡೆದಿದ್ದವು. ರಾಜ್ಯ ಸರಕಾರ ಎಲ್ಲ ಪಾಲಿಕೆಗಳ ಮಹಾಪೌರ ಉಪಮಹಾಪೌರ ಮೀಸಲಾತಿ ಘೋಷಿಸಿ ಚುನಾವಣೆಯನ್ನೂ ನಡೆಸಿ ಸದಸ್ಯರಿಗೆ ಅಧಿಕಾರವನ್ನು ಕೊಟ್ಟಿದೆ. ಆದರೆ ಬೆಳಗಾವಿಗೆ ಮಾತ್ರ ಚುನಾವಣೆ ನಡೆಸಿಲ್ಲ ಎಂದರು.
ಎರಡು ಬಾರಿ ಬೆಳಗಾವಿಯ ಮಹಾಪೌರರಾಗಿದ್ದ ಕುಡಚಿ, ಉಪಚುನಾವಣೆ ಹೊರತು ಪಡಿಸಿ ಚುನಾವಣೆ ನಡೆದು ಆಯ್ಕೆಯಾಗಿ ಪ್ರಮಾಣಪತ್ರ ಪಡೆದ ದಿನದಿಂದ 5 ವರ್ಷ ಸದಸ್ಯರ ಅಧಿಕಾರವಿರುತ್ತದೆ. ಆದರೆ, ಬೆಳಗಾವಿ ವಿಷಯದಲ್ಲಿ ಇನ್ನೊಂದು ವಾರದಲ್ಲಿ ಇಲ್ಲಿಯ ಸದಸ್ಯರ ಒಂದು ವರ್ಷದ ಅವಧಿ ನಿರರ್ಥಕವಾಗಿ ವ್ಯಯವಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಪಾಲಿಕೆಯ 58 ರಲ್ಲಿ 36 ಸೀಟ್ ಗೆದ್ದಿದೆ. ಆದರೆ ತಮ್ಮದೇ ಪಕ್ಷದ ಶಾಸಕರಿಂದ ತಮಗೆ ಅಧಿಕಾರ ದೊರೆಯಲು ಅಡ್ಡಿಯಾಗುತ್ತಿದೆ ಎಂದು ಅರಿತ್ತಿರುವ ಸದಸ್ಯರು ಕಾಂಗ್ರೆಸ್ ಸೇರಲು ಸಿದ್ದವಾಗಿದ್ದಾರೆ. ಅವರು ಸೇರಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದು ಆ ಮೂಲಕ ತಾವೂ ಶೀಘ್ರ ಅಧಿಕಾರ ಪಡೆಯುವದೂ ಬೇಡ. ಅವರು ಈ ವಿಷಯದಲ್ಲಿ ಕಾಂಗ್ರೆಸ್ ಬೆಂಬಲ ಕೇಳಿದರೆ ಅವರಿಗೆ ಬೆಂಬಲ ನೀಡಲು ಸಿದ್ದ ಎಂದು ಕುಡಚಿ ತಿಳಿಸಿದರು.
ಬೆಳಗಾವಿ ನಗರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಾಬಲ್ಯವನ್ನು ಮೊಟ್ಟಮೊದಲ ಬಾರಿ ಮುರಿದು ಎರಡು ಬಾರಿ ಬೆಳಗಾವಿಯ ಶಾಸಕರಾಗಿದ್ದ ಕುಡಚಿ ನಗರದ ಇಬ್ಬರೂ ಬಿಜೆಪಿ ಶಾಸಕರು ಪಾಲಿಕೆಯ ಸದಸ್ಯರಿಗೆ ಸದಸ್ಯತ್ವವನ್ನು ಅಧಿಕೃತವಾಗಿ ಪಡೆದುಕೊಳ್ಳಲು ಯಾಕೆ ಅಡ್ಡಿ ಮಾಡುತ್ತಿದ್ದಾರೆಂದು ಪ್ರತಿ ಸದಸ್ಯರಿಗೂ ಗೊತ್ತು. ಅವರು ತಮಗೆ ಸಂವಿಧಾನ ಬದ್ಧವಾಗಿ ದೊರೆತ ಹುದ್ದೆಯನ್ನು ಪಡೆದುಕೊಳ್ಳಲು ಅಡ್ಡಿಯಾಗಿರುವವರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬಿಜೆಪಿಯ ಸದಸ್ಯರು ಪಕ್ಷ ಬಿಡುವದು ಬೇಡ, ನಮ್ಮ ಬೆಂಬಲ ಬಯಸಿದರೆ ನಾವು ಅವರೊಂದಿಗೆ ನಿಂತು ಅವರ ಹಕ್ಕನ್ನು ಅವರಿಗೆ ಕೊಡಿಸುತ್ತೇವೆ ಎಂದರು.
ಶಾಸಕರಾಗಿದ್ದರೂ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರವನ್ನೂ ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡಿರುವ ಅಭಯ ಪಾಟೀಲ್ ಮತ್ತು ಅನಿಲ ಬೆನಕೆಯವರಿಗೆ ಕಾಂಗ್ರೆಸ್ ಪರವಾಗಿ ಮಹಾಪೌರರು ಧರಿಸುವ ಗೌನನ್ನು ಸಾರ್ವಜನಿಕವಾಗಿ ಹೊದಿಸಿ ಗೌರವಿಸುವ ಘಳಿಗೆ ಶೀಘ್ರ ಬರಲಿದೆ. ಇದಕ್ಕಾದರೂ ಅವರು ನಾಚಿಕೊಂಡು ಪಾಲಿಕೆಯ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಕೊಡುತ್ತಾರೋ ನೋಡೋಣ. ಪಾಲಿಕೆಯ ಸದಸ್ಯರು ಸ್ವಾತಂತ್ರೋತ್ಸವದ ದಿನದೊಳಗೆ ಅಧಿಕಾರ ಪಡೆಯಲಿದ್ದಾರೆ ಎಂದೂ ಶಾಸಕರು ತಿಳಿಸಿದ್ದರು ಎಂದು ಕುಡಚಿ ತಿಳಿಸಿದರು.
ಇನ್ನು ಸ್ಮಾರ್ಟ ಸಿಟಿ ಕಾಮಗಾರಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ನೋಡಿಕೊಳ್ಳುತ್ತಿವೆ. ತಮಗೂ ಯೋಜನೆಗೂ ಸಂಬಂಧವಿಲ್ಲದಿದ್ದರೂ ಬೆಳಗಾವಿಯ ಈ ಇಬ್ಬರೂ ಬಿಜೆಪಿ ಶಾಸಕರಿಗೆ ಇದರಲ್ಲಿ ತಲೆ ಹಾಕುತ್ತಿರುವದು ಯಾಕೆ ಎಂದು ಕುಡಚಿ ಪ್ರಶ್ನಿಸಿದರು.