ಬೆಳಗಾವಿ, ಜೂನ್ 25: ಉತ್ತರ ಕರ್ನಾಟಕದ ಸಹಕಾರಿ ಕ್ಷೇತ್ರದ ಭೀಷ್ಮ ಪಿತಾಮಹ, ಅರಿಹಂತ ಸಮೂಹ ಸಂಸ್ಥೆಯ ಸಂಸ್ಥಾಪಕ, ದಕ್ಷಿಣ ಭಾರತ ಜೈನ ಸಭಾದ ಅಧ್ಯಕ್ಷ, ಹಿರಿಯ ಸಾಮಾಜಿಕ, ರಾಜಕೀಯ ನಾಯಕ, ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ದಾದಾ ಎಂದೇ ಕರೆಯಲ್ಪಡುತ್ತಿದ್ದ ರಾವಸಾಹೇಬ ಪಾಟೀಲ ಅವರು ಮಂಗಳವಾರ ಬೆಳಿಗ್ಗೆ 10.40 ಕ್ಕೆ ಬೆಳಗಾವಿಯಲ್ಲಿರುವ ತಮ್ಮದೇ “ಅರಿಹಂತ” ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಕೆಲದಿನಗಳಿಂದ ವಯೋಸಹಜವಾಗಿ ಅನಾರೋಗ್ಯದಿಂದಿದ್ದ ಅವರಿಗೆ 83 ವರ್ಷ ವಯಸ್ಸಾಗಿತ್ತು
ಪತ್ನಿ ಮೀನಾಕ್ಷಿ, ಪುತ್ರರಾದ ಅಭಿನಂದನ್ ಪಾಟೀಲ, ಉತ್ತಮ ಪಾಟೀಲ, ಪುತ್ರಿ ದೀಪಾಲಿ, ಅಳಿಯ ಬಿಪಿನ್ ಪಾಟೀಲ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಮಂಗಳವಾರ ಮಧ್ಯಾಹ್ನ 2,30ರ ಸುಮಾರಿಗೆ ಅವರ ಪಾರ್ಥಿವ ಶರೀರದ ಅಂತ್ಯಯಾತ್ರೆ ಬೋರಗಾಂವ ಪಟ್ಟಣದಲ್ಲಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಸಂಜೆ 4 ಗಂಟೆಗೆ ಗ್ರಾಮದ ಅರಿಹಂತ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಸಂಜೆ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ತಿಳಿದು ಬಂದಿದೆ. ಅಂತ್ಯಸಂಸ್ಕಾರದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಾವಿರಾರು ಜನರು ಪಾಲ್ಗೊಂಡಿದ್ದರು.
ರಾವಸಾಹೇಬರ ನಡೆದು ಬಂದ ದಾರಿ….
ರಾವಸಾಹೇಬ ಪಾಟೀಲ ಅವರು ಏಪ್ರಿಲ್ 11, 1944 ರಂದು ಅಣ್ಣಾಸಾಹೇಬ ಮತ್ತು ಸುಮತಿ ದಂಪತಿಗೆ ಜನಿಸಿದರು. ರೈತ ಕುಟುಂಬದಿಂದ ಬಂದ ಅವರು ತಮ್ಮ ಕುಟುಂಬದಿಂದ ಸಾಮಾಜಿಕ ಕಾರ್ಯಗಳನ್ನು ತಮ್ಮ ತಂದೆ ಮತ್ತು ತಾಯಿಯಿಂದ ಕಲಿತರು. ಬೋರಗಾಂವ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಅವಿರತ ಪ್ರಯತ್ನಗಳನ್ನು ಮಾಡಿದ ಅವರು, ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಹಕಾರ ಮತ್ತು ಸಾಮಾಜಿಕ ಕಾರ್ಯಗಳೊಂದಿಗೆ ಧಾರ್ಮಿಕ ಕಾರ್ಯಗಳನ್ನು ಸಂಯೋಜಿಸಿದರು. ಅವರು ತಮ್ಮ ಜೀವನದಲ್ಲಿ ಅನೇಕ ಹೋರಾಟಗಳ ಮೂಲಕ ಯಶಸ್ಸು ಸಾಧಿಸಿದರು.
ಅವರು ಬೋರಗಾಂವನಲ್ಲಿ “ಅರಿಹಂತ ಉದ್ಯೋಗ ಗ್ರೂಪ್ ” ಸ್ಥಾಪಿಸಿ ಅದರ ಆರ್ಥಿಕ ಪ್ರಗತಿಯೊಂದಿಗೆ ಉತ್ತರ ಕರ್ನಾಟಕ ಜಿಲ್ಲೆಗಳ ರೈತರು ಸ್ವಾಭಿಮಾನದಿಂದ ತಲೆ ಎತ್ತುವಂತೆ ಮಾಡಿದರು. ಕೈಗಾರಿಕೋದ್ಯಮದ ಮೂಲಕ ವಿವಿಧ ವೇತನ ಯೋಜನೆಗಳು, ಆವಾಸ ಯೋಜನೆಗಳು, ವಿಕಲಚೇತನರಿಗೆ ಸೈಕಲ್ ವಿತರಣೆ ಮತ್ತು ನಿರ್ಗತಿಕರಿಗೆ ಶೈಕ್ಷಣಿಕ ಸಾಮಗ್ರಿಗಳ ಮೂಲಕ ಸಮಾಜಸೇವೆಯನ್ನು ಅವಿರತವಾಗಿ ಮುಂದುವರೆಸಿದ ಅವರು, ತಮ್ಮ ಜೀವನದುದ್ದಕ್ಕೂ ಯಾವುದೇ ಹುದ್ದೆಯನ್ನು ನಿರೀಕ್ಷಿಸದೇ ಜಾತ್ಯತೀತ ಮನೋಭಾವದಿಂದ ಜನರಿಗಾಗಿ ಕೆಲಸ ಮಾಡಿದರು.
ರಾಜಕೀಯ ಮಾಡುತ್ತಲೇ ಸಾಮಾನ್ಯ ಕಾರ್ಯಕರ್ತನನ್ನು ರಾಜಕೀಯದಿಂದ ಮೇಲೆತ್ತುವ ಕೆಲಸವನ್ನು ಅವರು ಮಾಡಿದರು. ಕೆಳವರ್ಗದ ಜನರನ್ನು ಬೆಂಬಲಿಸಿ ನಿಮ್ಮ ಹಿಂದೆ ನಾನಿದ್ದೇನೆ, ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿರಿ ಎಂದು ಹುರುದುಂಬಿಸುತ್ತಿದ್ದ ರಾವಸಾಹೇಬ ಪಾಟೀಲ ಅವರು, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು.
ಬೋರಗಾಂವ, ನಿಪ್ಪಾಣಿ ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗೆ ಸದಾ ಪ್ರಯತ್ನಿಸಿದ್ದ ಅವರು, ತಮ್ಮ ಗುಣ ವೈಶಿಷ್ಠ್ಯದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಜನರಲ್ಲಿ ಹುಮ್ಮಸ್ಸು ಮೂಡಿಸಿದ್ದರು. 83ರ ಹರೆಯದ ರಾವಸಾಹೇಬ ಪಾಟೀಲರ ಹುಮ್ಮಸ್ಸು, ಉತ್ಸಾಹ ಬೆರಗುಗೊಳಿಸುವಂತಿತ್ತು. ಚಿಕ್ಕವರಿರಲಿ, ದೊಡ್ಡವರಿರಲಿ ನಯ, ವಿನಯದಿಂದ ಅವರು ಜನರೊಂದಿಗೆ ಬೆರೆಯುತ್ತಿದ್ದರು.
ದಕ್ಷಿಣ ಭಾರತ ಜೈನ ಸಭಾದ ಪುನರುಜ್ಜೀವನ
ಜೈನ ಸಮುದಾಯದ ಪ್ರತಿಷ್ಠೆಯೆಂದು ಪರಿಗಣಿಸಲಾದ ದಕ್ಷಿಣ ಭಾರತ ಜೈನ ಸಭಾದ ಅಧ್ಯಕ್ಷರಾಗಿ ರಾವಸಾಹೇಬ ಪಾಟೀಲ ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಕೃತಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ ಅವರು ಸಮಾಜದ ಪ್ರತಿ ಮಗು ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ ಯೋಜನೆಯನ್ನು ಕೈಗೊಂಡರು. ಇಂದು ಈ ಸ್ಕಾಲರಶಿಪ್ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಲಭ್ಯವಿದ್ದು, ಈ ಮೂಲಕ ಅನೇಕ ಜನರು ಶಿಕ್ಷಣ ಪಡೆದುಕೊಂಡಿದ್ದಾರೆ ಮತ್ತು ಬಡವರು ಆರೋಗ್ಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ನೀರು ಹರಿಸಿದ ರಾವಸಾಹೇಬ
ಬೋರಗಾಂವದಲ್ಲಿ ನೀರಿನ ಸಮಸ್ಯೆ ಅತಿಯಾಗಿತ್ತು. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಅವರ ಮೂಲಕ ವಿಶ್ವ ಬ್ಯಾಂಕ್ ನಿಂದ ಈ ನೀರಿನ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು. ಇಂದು ಅವರಿಂದಾಗಿ ಇಡೀ ನಗರವಾಸಿಗಳು ಕುಡಿಯುವ ನೀರು ಪಡೆಯುತ್ತಿದ್ದಾರೆ. ಇಂತಹ ಅನೇಕ ನೀರಿನ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ರೈತರು ಮತ್ತು ನಾಗರಿಕರ ಜೀವನ ಸಮೃದ್ಧವಾಗಿದೆ.
ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಸಂತಾಪ
ರಾವಸಾಹೇಬ ಪಾಟೀಲ ಅವರ ನಿಧನಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ರಾವಸಾಹೇಬ ಪಾಟೀಲ ಅವರ ಸಾಮಾಜಿಕ ಹಾಗೂ ಸಹಕಾರ ರಂಗದ ಸೇವೆಯನ್ನು ಅವರು ಸ್ಮರಿಸಿದ್ದಾರೆ.