ವರ್ಲಿ ಚಿತಾಗಾರದಲ್ಲಿ ಇಂದೇ ರತನ್ ಟಾಟಾ ಅಂತ್ಯಕ್ರಿಯೆ

A B Dharwadkar
ವರ್ಲಿ ಚಿತಾಗಾರದಲ್ಲಿ ಇಂದೇ ರತನ್ ಟಾಟಾ ಅಂತ್ಯಕ್ರಿಯೆ

ಮುಂಬೈ: ದೇಶದ ಖ್ಯಾತ ಹಿರಿಯ ಕೈಗಾರಿಕೋದ್ಯಮಿ ಹಾಗೂ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ (86) ಬುಧವಾರ ವಿಧಿವಶರಾಗಿದ್ದು ಕಳೆದ ಸೋಮವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ದಾಖಲಾಗಿದ್ದ ರತನ್ ಟಾಟಾ ಬುಧವಾರ ರಾತ್ರಿ ಕೊನೆಯುಸಿರೆಳೆದರು. ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ರಾಷ್ಟ್ರೀಯ ಲಿಲಿತ ಕಲಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಬೆಳಗ್ಗೆ 10 ರಿಂದ ಮಧ್ಯಾಹ್ನ 3:30 ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಧ್ಯಾಹ್ನ 3.30ಕ್ಕೆ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ವರ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ತಿಳಿಸಿದ್ದಾರೆ. ಈ ವೇಳೆ ಕೇಂದ್ರದ ಪರವಾಗಿ ಗೃಹ ಸಚಿವ ಅಮಿತ್ ಶಾ ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಶೋಕಾಚರಣೆಯ ಸಂಕೇತವಾಗಿ ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳ ಮೇಲೆ ತ್ರಿವರ್ಣ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿದ ಮುಖ್ಯಮಂತ್ರಿ ಶಿಂದೆ. 150 ವರ್ಷಗಳಷ್ಟು ಹಳೆಯದಾದ ಟಾಟಾ ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸಿದ ಜೀವಂತ ದಂತಕಥೆ ರತನ್ ಟಾಟಾ ಅವರದ್ದು, ಅವರು ಕಾಲಕಾಲಕ್ಕೆ ತೆಗೆದುಕೊಂಡಿರುವ ನಿರ್ಣಯಗಳು ಟಾಟಾ ಸಮೂಹ ಸಂಸ್ಥೆಗಳು ಈ ಮಟ್ಟಕ್ಕೆ ಬೆಳೆಯಲು ಸ್ಪೂರ್ತಿಯಾಗಿವೆ ಎಂದು ಹೇಳಿಕೊಂಡಿದ್ದಾರೆ.

ರತನ್ ಟಾಟಾ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ರಾಜ್ಯ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್ ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.