ಲೋಕಾರ್ಪಣೆಗೊಂಡಿತು ರಾಯಣ್ಣ ‘ಶಿಲ್ಪವನ ‘

A B Dharwadkar
ಲೋಕಾರ್ಪಣೆಗೊಂಡಿತು ರಾಯಣ್ಣ ‘ಶಿಲ್ಪವನ ‘

ಬೆಳಗಾವಿ, 17: ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ರೂಪುರೇಷೆಗಳನ್ನು ಬಿಂಬಿಸುವ ಶಿಲ್ಪವನ (ರಾಕ್ ಗಾರ್ಡನ್) ಮತ್ತು ಸೈನಿಕ ಶಾಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಲೋಕಾರ್ಪಣೆಗೊಳಿಸಿದರು.

ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದ ಹೊರ ವಲಯದ ‘ಶೌರ್ಯ ಭೂಮಿ’ ಯಲ್ಲಿ ನಿರ್ಮಿಸಿರುವ ಈ ರಾಕ್​ ಗಾರ್ಡನ್​, 10 ಎಕರೆ ವಿಶಾಲ ಪ್ರದೇಶದಲ್ಲಿ 12 ಕೋಟಿ ರೂಪಾಯಿ ಅನುದಾನದಲ್ಲಿ ರಾಯಣ್ಣನ ಸಮಗ್ರ ಜೀವನ ಚರಿತ್ರೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಾ ಜೀವನದ‌ ಘಟನೆಗಳನ್ನು ಸಾರುವ 1,600ಕ್ಕೂ ಹೆಚ್ಚಿನ ಮೂರ್ತಿಗಳನ್ನು ವಿನ್ಯಾಸಗೊಳಿಸಲಾಗಿದೆ.

ರಾಯಣ್ಣನ ಹೋರಾಟದ ಕುರಿತಾಗಿರುವ ಮೂರ್ತಿಗಳು, ಗರಡಿ ಮನೆ, ಕಿತ್ತೂರು ಕೋಟೆ, ಕುಸ್ತಿ ಮೈದಾನ, ವೀರಭದ್ರ ದೇವಸ್ಥಾನ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು, ಸಂಪಗಾವಿ ಜೈಲಿನ ಮೇಲೆ ದಾಳಿ, ಧಾರವಾಡ ಜೈಲುವಾಸ, ಸುಂಕ ಪಾವತಿ ಮಾಡದಿರುವುದಕ್ಕೆ ರಾಯಣ್ಣನ ತಾಯಿಯ ತಲೆ ಮೇಲೆ ಕುಲಕರ್ಣಿ ಕಲ್ಲು ಹೊರಿಸಿದ್ದು, ಡೋರಿ-ಬೆಣಚಿ ಹಳ್ಳದಲ್ಲಿ ಮೋಸದಿಂದ ರಾಯಣ್ಣನ ಹಿಡಿದಿದ್ದು, ತನ್ನ ಏಳು ಜನ ಸಹಚರರೊಂದಿಗೆ ನಂದಗಡದಲ್ಲಿ ಗಲ್ಲಿಗೆ ಏರುವ ದೃಶ್ಯಗಳು ನೋಡುಗರ ಮೈಮನ ರೋಮಾಂಚನಗೊಳಿಸುತ್ತವೆ.

ರಾಯಣ್ಣ ಸೈನಿಕ ಶಾಲೆ
——————————
100 ಎಕರೆ ಪ್ರದೇಶದಲ್ಲಿ‌ 150 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡಿರುವ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ವಸತಿ ಶಾಲೆ” ಯಲ್ಲಿ 6 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ, ಭೋಜನಾಲಯ, ಗ್ರಂಥಾಲಯ, ಶಿಕ್ಷಕರ ವಸತಿ ಗೃಹ, ಆಡಿಟೋರಿಯಂ ಹಾಗೂ ಕೆಲಸಗಾರರು ಉಳಿದುಕೊಳ್ಳಲು ಹೈಟೆಕ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ.

ಬೃಹತ್ ಕ್ರೀಡಾ ಮೈದಾನ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಬರುವ ಈಜುಕೊಳ, ಹಾರ್ಸ್ ರೈಡಿಂಗ್, ಹಾಕಿ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಅಥ್ಲೆಟಿಕ್ಸ್ ಸೇರಿದಂತೆ ಎಲ್ಲ ಕ್ರೀಡೆಗಳಿಗೂ ಸಂಬಂಧಿಸಿದ ಆಟದ ಮೈದಾನವನ್ನು ಸಿದ್ಧಪಡಿಸಲಾಗಿದೆ. ಜನವರಿ 17 ಮತ್ತು 18ರಂದು ಸಂಗೊಳ್ಳಿ ಉತ್ಸವ ಆಯೋಜಿಸಲಾಗಿದೆ.

ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಗ್ರಾಮಸ್ಥರು
——————————————————
“ಸಮದರ್ಶಿ” ಯೊಂದಿಗೆ ಮಾತನಾಡಿದ ಸಂಗೊಳ್ಳಿಯ ಗ್ರಾಮಸ್ಥರು, “ರಾಯಣ್ಣನ ಶಿಲ್ಪವನ ಅತ್ಯಾಕರ್ಷವಾಗಿದೆ. ಒಂದೊಂದು ಶಿಲ್ಪವು ಒಂದೊಂದು ಕಥೆ ಹೇಳುತ್ತದೆ. ರಾಯಣ್ಣನ ಹುಟ್ಟಿನಿಂದ ಗಲ್ಲಿಗೆ ಏರುವ ತನಕ ಎಲ್ಲ ಸಂದರ್ಭವನ್ನು ತುಂಬಾ ಚೆನ್ನಾಗಿ ಕಟ್ಟಿಕೊಡಲಾಗಿದೆ. ಶಿಲ್ಪವನದಲ್ಲಿ ಒಂದು ಸುತ್ತು ಹಾಕಿದರೆ ರಾಯಣ್ಣನ ಸಂಪೂರ್ಣ ಚರಿತ್ರೆ ಓದಿದಂತಾಗುತ್ತದೆ. ಕೆಲವೇ ದಿನಗಳಲ್ಲಿ ಈ ಸ್ಥಳ ಪ್ರೇಕ್ಷಣಿಯ ಸ್ಥಳವಾಗಲಿದೆ. ಶಾಲೆ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ಪ್ರವಾಸದ ಕೇಂದ್ರವಾಗಲಿದೆ.
ಉತ್ಸವದ ಸಂದರ್ಭದಲ್ಲಿ ಇದು ಲೋಕಾರ್ಪಣೆ ಆಗುತ್ತಿರುವುದು ನಮಗೆ ಸಂತಸ ಮತ್ತು ಹೆಮ್ಮೆಯ ಸಂಗತಿ. ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ” ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.