ಬೆಂಗಳೂರು, ಮೇ 7– ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತನ್ನ ಬೆಂಬಲ ನೀಡುವುದಾಗಿ ಅಧಿಕೃತ ಪತ್ರವನ್ನು ಕರ್ನಾಟಕ ವೀರಶೈವ ಲಿಂಗಾಯತ ವೇದಿಕೆ ಬಿಡುಗಡೆ ಮಾಡಿದ್ದು ಲಿಂಗಾಯತ ಸಮುದಾಯದ ಜನರು ಕಾಂಗ್ರೆಸ್ಗೆ ಮತ ನೀಡುವಂತೆ ವೇದಿಕೆ ಮನವಿ ಮಾಡಿದೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಂಘಟನೆಯ ಮುಖಂಡ ಕೆ. ವಿನಾಗರಾಜಮೂರ್ತಿ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವು ಲಿಂಗಾಯತರನ್ನು ಕಡೆಗಣಿಸಿದೆ. ನಾವು ಹಿಂದುತ್ವದಲ್ಲಿ ನಂಬಿಕೆ ಇರುವವರು. ಹಿಂದುತ್ವದಲ್ಲೇ ಮುಂದುವರಿಯುತ್ತೇವೆ. ನಮಗೆ ಲಿಂಗಾಯತರ ಅವಶ್ಯಕತೆ ಇಲ್ಲ. ಇನ್ನೆಷ್ಟುದಿನ ಲಿಂಗಾಯತರನ್ನು ಓಲೈಸಿಕೊಂಡಿರಬೇಕು ಎಂದು ಬಿ.ಎಲ್. ಶಂಕರ ಅವರು ಹೇಳುವ ಮೂಲಕ ಅಹಂಕಾರದ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಲಿಂಗಾಯತರನ್ನು ಕಡೆಗಣಿಸುತ್ತಲೇ ಇದೆ. ಪಠ್ಯಪುಸ್ತಕದಲ್ಲಿ ವಚನಕಾರರನ್ನು ಕಡೆಗಣಿಸಿದರು. ವಚನ ಸಾಹಿತ್ಯವನ್ನು ಕೈಬಿಟ್ಟರು. ಬಸವಣ್ಣನ ವಿಚಾರಧಾರೆಗಳನ್ನು ತಿರುಚಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಚನ ಸಂಗೀತೋತ್ಸವ ಕೈಬಿಡಲಾಗಿದೆ. ಈ ಸಂಗೀತೋತ್ಸವಕ್ಕೆ ಮೀಸಲಿರಿಸಲಾಗಿದ್ದ 90 ಲಕ್ಷರೂಪಾಯಿಗಳನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಸುನೀಲ ಕುಮಾರ ಅವರು ಕಾರ್ಕಳ ಉತ್ಸವಕ್ಕೆ ಬಳಸಿಕೊಂಡರು ಎಂದು ಆರೋಪಿಸಿದರು.
ರಾಜ್ಯದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಲಿಂಗಾಯತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಕೆಳಗಿಳಿಸಲಾಯಿತು. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ಕೈ ತಪ್ಪುವಂತೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೂ ಟಿಕೆಟ್ ಕೈತಪ್ಪುವಂತೆ ಮಾಡಿ, ಅವರು ಬಿಜೆಪಿಯನ್ನು ತೊರೆಯುವಂತೆ ಮಾಡಲಾಯಿತು. ಆಯನೂರು ಮಂಜುನಾಥ, ಸೊಗಡು ಶಿವಣ್ಣ ಹಾಗೂ ಸಂಜಯ ಪಾಟೀಲ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ವೀರಶೈವ ಹಾಗೂ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ನಾವು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಕೇಳಿಕೊಳ್ಳುತ್ತೇವೆ. ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ. ಈ ಮೂಲಕ ಲಿಂಗಾಯತರು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.