ಬೆಳಗಾವಿ, ೧೫- ನಿವೃತ್ತ ಮುಖ್ಯೋಪಾಧ್ಯಾಯ , ಹಿರಿಯ ಸಾಹಿತಿ , ಪತ್ರಕರ್ತ ಪುಂಡಲೀಕ ಪಾಟೀಲ ಅವರು ಶನಿವಾರ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ನಿಧನ ಕಾಲಕ್ಕೆ ೮೮ ವರ್ಷ ವಯಸ್ಸಾಗಿತ್ತು, ಪತ್ನಿ, ಇಬ್ಬರು ಪುತ್ರಿಯರು ಒಬ್ಬ ಪುತ್ರನನ್ನು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
೩೦ ಕ್ಕೂ ಅಧಿಕ ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದ ಅವರು ಹಲವು ಸನ್ಮಾನಗಳಿಗೆ ಭಾಜನರಾಗಿದ್ದರು. ಬೀದಿ ನಾಟಕಗಳನ್ನು ಮಾಡಿ ಜಿಲ್ಲಾಡಳಿತದಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ದಿವಂಗತರು ಬೆಳಗಾವಿಯ ಜನಸಾಹಿತ್ಯ ಪೀಠದ ಅಧ್ಯಕ್ಷರೂ ಆಗಿದ್ದರು.
ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ಮತ್ತು ಕರ್ನಾಟಕ ಪತ್ರಕರ್ತರ ಸಂಘವು ಮೃತರಿಗೆ ಶೃದ್ಧಾಂಜಲಿ ಸಲ್ಲಿಸಿದೆ.