ಹೈದರಾಬಾದ, ೫: ತೆಲಂಗಾಣ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ ರೆಡ್ಡಿ ಹೈಕಮಾಂಡ್ ನ ಮೊದಲ ಆಯ್ಕೆ ಆಗಿದ್ದು ನಾಳೆ ಅಥವಾ ಗುರುವಾರ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.
ಹಿರಿಯರಾದ ಉತ್ತಮ ಕುಮಾರ ರೆಡ್ಡಿ ಮತ್ತು ಭಟ್ಟಿ ವಿಕ್ರಮಾಕ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು ಆದರೆ ಹೈಕಮಾಂಡ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಅಥವಾ ಉತ್ತಮ ಖಾತೆ ನೀಡುವ ಆಲೋಚನೆಯಲ್ಲಿದೆ. ಆದರೆ ಮುಖ್ಯಮಂತ್ರಿ ಸ್ಥಾನದ ಕುರಿತು ಇದುವರೆಗೆ ಹೈಕಮಾಂಡ್ ಇದುವರೆಗೂ ಬಾಯಿ ಬಿಟ್ಟಿಲ್ಲ.
ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಕರ್ನಾಟಕದ ನಂತರ, ತೆಲಂಗಾಣ ದಕ್ಷಿಣದ ಎರಡನೇ ರಾಜ್ಯವಾಗಿದ್ದು, ಅಲ್ಲಿ ಕಾಂಗ್ರೆಸ್ ತನ್ನದೇ ಆದ ಸರ್ಕಾರವನ್ನು ರಚಿಸುತ್ತಿದೆ. ತೆಲಂಗಾಣದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮೊದಲಿನಿಂದಲೂ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು.
ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರೇವಂತ್ ರೆಡ್ಡಿ ಕಾಂಗ್ರೆಸ್‌ನ ಮುಖವಾಗಿದ್ದರು. ಪ್ರಚಾರದ ಸಮಯದಲ್ಲಿ ಅವರು ಯಾವಾಗಲೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯೊಂದಿಗೆ ಕಾಣುತ್ತಿದ್ದರು. ತೆಲಂಗಾಣದಲ್ಲಿ ಗೆಲುವಿನ ಗರಿಷ್ಠ ಶ್ರೇಯಸ್ಸು ರೇವಂತ ರೆಡ್ಡಿ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿ ಉಳಿಯಿತು. ರೇವಂತ ರೆಡ್ಡಿ ಪ್ರಸ್ತುತ ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ. 2019 ರಲ್ಲಿ ಗೆದ್ದ ತೆಲಂಗಾಣದ ಮೂವರು ಕಾಂಗ್ರೆಸ್ ಲೋಕಸಭಾ ಸಂಸದರಲ್ಲಿ ರೆಡ್ಡಿ ಕೂಡ ಒಬ್ಬರು.