ನಿಪ್ಪಾಣಿ, ೮- ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ ವೈಭವೀಕರಿಸಿ ವ್ಯಕ್ತಿಯೋರ್ವ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಸ್ಟೇಟಸ್ ಕುರಿತು ಕೊಲ್ಹಾಪುರದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಮಹಾರಾಷ್ಟ್ರ ಗಡಿಯ ಬೆಳಗಾವಿ ಜಿಲ್ಲೆಯ ಗಡಿ ಭಾಗಗಳಲ್ಲಿ ಅಲರ್ಟ ಘೋಷಿಸಲಾಗಿದೆ.
ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಕುರಿತು ಹಾಕಿರುವ ಸ್ಟೇಟಸ್ ಗಳು ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳು ಬುಧವಾರ ಕೊಲ್ಲಾಪುರ ಬಂದ್ ಗೆ ಕರೆ ನೀಡಿದ್ದವು. ಆಗ ಹಿಂಸಾಚಾರ ನಡೆದು ಕಲ್ಲು ತೂರಾಟ ಉಂಟಾಗಿತ್ತು.
ಈ ನಡುವೆ ನಿಪ್ಪಾಣಿಯ 16 ವರ್ಷದ ಯುವಕನೋರ್ವ ಅದೇ ರೀತಿಯ ವಿವಾದಸ್ಪದ ಪೋಸ್ಟ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ ಮಾಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬುಧವಾರ ರಾತ್ರಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ ಪಾಟೀಲ ಅವರು ನಿಪ್ಪಾಣಿಗೆ ಭೆಟ್ಟಿ ನೀಡಿದ್ದು ಗಡಿ ಗ್ರಾಮಗಳಲ್ಲಿ ಕಟ್ಟೆಚ್ಚರ ಘೋಷಿಸಿದರು. ಅಲ್ಲದೇ ಪುಣೆ- ಬೆಂಗಳೂರು ರಾಷ್ಟೀಯ ಹೆದ್ದಾರಿಯ ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಹೆಚ್ಚಿನ ಪೊಲೀಸ್ ವ್ಯವಸ್ಥೆ ಏರ್ಪಡಿಸಲಾಗಿದೆ.
ನಿಪ್ಪಾಣಿ, ಕೊಗನೊಳ್ಳಿ, ಏಕ್ಸಂಬಾ, ಬೋರಗಾಂವ, ಅಕ್ಕೋಲ, ಬೇಡಕಿಹಾಳ, ಮಾಣಿಕಪುರ, ಸಿದ್ನಾಳ, ಮಂಗೂರ ಮತ್ತು ಚಂದೂರ ಗ್ರಾಮಗಳಲ್ಲಿ ಎಚ್ಚರಿಕೆ ಸಾರಲಾಗಿದ್ದು ವದಂತಿಗಳನ್ನು ನಂಬಬೇಡಿ, ಪ್ರತಿಕ್ರಿಯಿಸಲೂ ಬೇಡಿ ಎಂದು ಸಲಹೆ ನೀಡಲಾಗಿದೆ.
ಕೊಲ್ಹಾಪುರ ನಗರದಲ್ಲಿ ಬುಧವಾರ ನಡೆದ ಹಿಂದೂ ಸಂಘಟನೆಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಇದು ಇತರ ಸ್ಥಳಗಳಿಗೂ ಹಬ್ಬದಿರಲು ಸಂಜೆ 5 ಗಂಟೆಯಿಂದ ಗುರುವಾರ ರಾತ್ರಿ 12 ಗಂಟೆಯ ವರೆಗೆ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.
ಕೊಲ್ಲಾಪುರ ಜಿಲ್ಲಾ ಸಚಿವ ದೀಪಕ ಕೇಸರಕರ ಬುಧವಾರ ಶಾಂತಿ ಸಭೆ ಏರ್ಪಡಿಸಿದ್ದರು. ಜಿಲ್ಲಾಧಿಕಾರಿ ಭಗವಾನ್ ಕಾಂಬ್ಳೆ ಮತ್ತು ಪೊಲೀಸ್ ಮುಖ್ಯಾಧಿಕಾರಿ ಮಹೇಂದ್ರ ಪಂಡಿತ ಉಪಸ್ಥಿತರಿದ್ದು ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿಕೊಂಡರು. ಕೊಲ್ಲಾಪುರ ನಗರದಲ್ಲಿ ಜೂನ್ 19ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.