ಬೆಳಗಾವಿಯಲ್ಲಿ ರೋಟರಿ ಕ್ಲಬ್ ನ 5 ದಿನಗಳ “ಕೃಷಿ ಉತ್ಸವ”ಕ್ಕೆ ಚಾಲನೆ

A B Dharwadkar
ಬೆಳಗಾವಿಯಲ್ಲಿ ರೋಟರಿ ಕ್ಲಬ್ ನ 5 ದಿನಗಳ “ಕೃಷಿ ಉತ್ಸವ”ಕ್ಕೆ ಚಾಲನೆ

ಬೆಳಗಾವಿ, 7: ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌,  ಕೃಷಿ  ಮತ್ತು ತೋಟಗಾರಿಕೆ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ರೋಟರಾಕ್ಟ ಕ್ಲಬ್‌ ಆಫ್‌ ಬೆಲಗಾಮ್‌ ಸೆಂಟ್ರಲ್‌ ಇವರ ಸಹಕಾರದಲ್ಲಿ ‘ರೋಟರಿ ಕ್ಲಬ್ ಆಫ್ ಬೆಲಗಾಮ್ ಸೆಂಟ್ರಲ್’ ವತಿಯಿಂದ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಆಯೋಜಿಸಿರುವ ಐದು ದಿನಗಳ “ಬೆಳಗಾವಿ ಕೃಷಿ ಉತ್ಸವ” ಗುರುವಾರದಿಂದ ಆರಂಭಗೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಿ, ರೋಟರಿ ಕ್ಲಬ್ ಅನೇಕ ಉತ್ಸವಗಳನ್ನು ಆಯೋಜಿಸಿದ್ದು ಆದರೆ ಕೃಷಿ ಕುರಿತು ಆಯೋಜಿಸಿರುವ ಮೊದಲ ಉತ್ಸವ ಇದಾಗಿದೆ. ಅವರ ಮೊದಲ ಉತ್ಸವವೇ ಉತ್ತೇಜನಾತ್ಮಕವಾಗಿದೆ. ಪ್ರತಿ ವರುಷ ಕೃಷಿ ಕುರಿತು ಉತ್ಸವ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲ ಆಗುವುದು. ಪ್ರಥಮ ಯತ್ನದಲ್ಲೇ ರೋಟರಿ ಕ್ಲಬ್ ಯಶಸ್ವಿಯಾಗಿದೆ ಎಂದು ಹೇಳಿದರು.

ಬೇರೆ ಬೇರೆ ಕ್ಷೇತ್ರಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇಷ್ಟೆಲ್ಲ ಮುಂದುವರೆದರೂ ಕೃಷಿ ಕ್ಷೇತ್ರದಲ್ಲಿ ನಾವು ಇನ್ನೂ 30% ರಷ್ಟು ಗುರಿ ತಲುಪಲು ಸಾಧ್ಯವಾಗಿಲ್ಲ. ಈ ರೀತಿಯ ಉತ್ಸವಗಳಿಂದ ಕೃಷಿಕರನ್ನು ಕ್ಷೇತ್ರದಲ್ಲೇ ಮುಂದುವರಿಯಲು ಸಹಕಾರಿಯಾಗಬಹುದು. ಸ್ಟಾಲ್ಸಗಳಲ್ಲಿ ಪ್ರದರ್ಶನಕ್ಕಿಡಲಾಗಿರುವ ಸಲಕರಣೆ, ಬಿತ್ತನೆ ಬೀಜ, ಗೊಬ್ಬರಗಳನ್ನು ಬಳಸುವುದರಿಂದ ನಿರೀಕ್ಷೆಗಿಂತ ಹೆಚ್ಚು ಇಳುವರಿ ಪಡೆಯಲು ಸಾಧ್ಯವೆಂದು ಸಚಿವ ಜಾರಕಿಹೊಳಿ ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ನ ಮಂಜುನಾಥ ಅಳವಣಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿ, ಉತ್ಸವದ ಕುರಿತು ಮಾಹಿತಿ ನೀಡಿದರು. ಕೃಷಿ ಕ್ಷೇತ್ರದ ಅತ್ಯಾಧುನಿಕತೆಗೆ ಪೂರಕವಾಗುವ ಸುಮಾರು 200 ಸ್ಟಾಲ್ ಇವೆ ಎಂದು ಅವರು ತಿಳಿಸಿದರು.

ಕೃಷಿ ವಿಶ್ವವಿದ್ಯಾನಿಲಯ ಧಾರವಾಡದ ಉಪ ಕುಲಪತಿ ಪಿ ಎಲ್ ಪಾಟೀಲ ಮಾತನಾಡಿ, ರೋಟರಿ ಕ್ಲಬ್ ಸಾಮಾಜಿಕ ಮತ್ತು ಕೃಷಿ ಮೇಳದಂಥ ಅನೇಕ ಕಾರ್ಯಕ್ರಮ ಆಯೋಜಿಸಿ ಜನರನ್ನು ಉತ್ತೇಜಿಸುತ್ತಿದೆ. ಇದು ಕೃಷಿಕರಿಗೆ ಅತ್ಯಾಧುನಿಕ ಮುಂದುವರೆದ ತಂತ್ರಜ್ಞಾನ ಬಳಸಿ ಜಮೀನಿನಲ್ಲಿ ಹೆಚ್ಚು ಇಳುವರಿ ಪಡೆಯಲು ಮಾರ್ಗದರ್ಶನ ಮತ್ತು ನೆರವು ನೀಡುತ್ತಿದೆ ಎಂದರು.

ಜನರಿಗೆ ಅದರಲ್ಲೂ ಕೃಷಿಕ ಕುಟುಂಬದ ಯುವಕರನ್ನು ಕೃಷಿ ಕ್ಷೇತ್ರದಲ್ಲಿ ಮುಂದುವರೆಯಲು ಉತ್ತೇಜಿಸುವ ಅಗತ್ಯವಿದ್ದು ರಾಜ್ಯದ ಆರೂ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತ ಕುಟುಂಬದ ಸದಸ್ಯರಿಗೆ 50% ಸೀಟ್ ಮೀಸಲಿಟ್ಟಿದೆ ಎಂದು ತಿಳಿಸಿದರು.

ಕ್ಲಬ್ ಸದಸ್ಯ ನಾಸಿರ ಮಾತನಾಡಿ, ರೋಟರಿ ಕ್ಲಬ್ ಅನೇಕ ಉತ್ಸವಗಳನ್ನು ಆಯೋಜಿಸಿದೆಯಾದರೂ ಕೃಷಿ ಉತ್ಸವವನ್ನು ಮೊದಲ ಸಲ ಆಯೋಜಿಸಿದೆ. ಇದನ್ನು ಮುಂದೆ ಪ್ರತಿ ವರುಷವೂ ಆಯೋಜಿಸಲಾಗುವುದು ಎಂದರು.

ಕೊನೆಯಲ್ಲಿ ಕ್ಲಬ್ ನ ಹಿಂದಿನ ಅಧ್ಯಕ್ಷ ಶಕೀಲ ಶೇಖ ಅಲಿ ವಂದಿಸಿ, ಉತ್ಸವದಲ್ಲಿ ರೈತರಿಗೆ ಪ್ರತಿದಿನ ಸಲಹಾ ಕಾರ್ಯಾಗಾರ ಆಯೋಜಿಸಿದ್ದು ರೈತರು ಇದರ ಪ್ರಯೋಜನ ಪಡೆಯುವಂತೆ ಕೋರಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.