ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಆದಾಯ ಅಸಮಾನತೆ ಮತ್ತು ನಿರುದ್ಯೋಗ ಸಮಸ್ಯೆ ಬಗ್ಗೆ ಆರ್ ಎಸ್ ಎಸ್ ಆತಂಕ ವ್ಯಕ್ತಪಡಿಸಿದೆ.
ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸ್ವದೇಶಿ ಜಾಗರಣ ಮಂಚ ಆಯೋಜಿಸಿದ್ದ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ಬಡತನ ನಮ್ಮ ಎದುರು ರಾಕ್ಷಸನಂತೆ ಸವಾಲೊಡ್ಡಿದೆ. ದೇಶದಲ್ಲಿ 20 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಹೇಳಲು ನಾವು ದುಃಖಪಡಬೇಕು ಎಂದಿದ್ದಾರೆ.
23 ಕೋಟಿ ಜನರು ದಿನಕ್ಕೆ 375 ರೂ. ಕ್ಕಿಂತ ಕಡಿಮೆ ಸಂಪಾದಿಸುತ್ತಿದ್ದಾರೆ. ರಾಕ್ಷಸನಂತೆ ಬೃಹದಾಕಾರದಲ್ಲಿ ಬೆಳೆದಿರುವ ಬಡತನದ ಸಂಪೂರ್ಣ ನಿರ್ಮೂಲನೆ ಮುಖ್ಯ. ಈ ಸವಾಲುಗಳನ್ನು ಎದುರಿಸಲು ಕಳೆದ ಕೆಲವು ವರ್ಷಗಳಿಂದ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೇಶದಲ್ಲಿ 4 ಕೋಟಿ ಜನರು ನಿರುದ್ಯೋಗಿಗಳಿದ್ದಾರೆ. ಗ್ರಾಮೀಣ ಭಾಗದಲ್ಲಿ 2.2 ಕೋಟಿ ಹಾಗೂ ನಗರ ಪ್ರದೇಶಗಳಲ್ಲಿ 1.8 ಕೋಟಿ ನಿರುದ್ಯೋಗಿಗಳು ಇದ್ದಾರೆ. ಈ ಹಿಂದಿನ ಸರ್ಕಾರದ ದೋಷಪೂರಿತ ಆರ್ಥಿಕ ನೀತಿಗಳು, ರೋಗಗ್ರಸ್ಥ ಆರ್ಥಿಕತೆ ಈ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಅವರು ದೂಷಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆಗಳು ಮತ್ತು ಕೌಶಲ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಉಪಕ್ರಮಗಳಿಗೆ ಉತ್ತೇಜನ ನೀಡಬೇಕು. ಆ ಮೂಲಕ ಗ್ರಾಮೀಣ ಮಟ್ಟದಲ್ಲಿ ಉದ್ಯೋಗವಕಾಶ ಸೃಷ್ಟಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಎಸ್ಜೆಎಂ ಸ್ವಾವಲಂಬಿ ಭಾರತ್ ಅಭಿಯಾನ್ ಪ್ರಾರಂಭಿಸಿದೆ. ಇದರ ಮೂಲಕ, ಎಸ್ಜೆಎಂ ಕೃಷಿ ಮತ್ತು ಇದರ ಅವಲಂಬಿತ ಕ್ಷೇತ್ರಗಳಲ್ಲಿ ಹೊಸ ಉಪಕ್ರಮಗಳ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದೆ. ಜತೆಗೆ ಗ್ರಾಮೀಣ ಮಟ್ಟದಲ್ಲಿ ಕೌಶಲ ಅಭಿವೃದ್ಧಿ ಮತ್ತು ಮಾರುಕಟ್ಟೆ ಒದಗಿಸುತ್ತದೆ ಎಂದು ಹೊಸಬಾಳೆ ಹೇಳಿದರು.
ಇಷ್ಟೊಂದು ಆದಾಯ ಅಸಮಾನತೆಯ ನಡುವೆಯೂ ಭಾರತ, ವಿಶ್ವದ ಆರು ಅತಿದೊಡ್ಡ ಆರ್ಥಿಕತೆಯ ದೇಶಗಳಲ್ಲಿ ಒಂದೆನಿಸಿದೆ. ಒಟ್ಟು ಆದಾಯದಲ್ಲಿ ಶೇ 13ರಷ್ಟನ್ನು ಮಾತ್ರ ದೇಶದ ಶೇ 50ರಷ್ಟು ಜನಸಂಖ್ಯೆ ಹೊಂದಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ 1 ಭಾಗವು ರಾಷ್ಟ್ರದ ಆದಾಯದ 5ನೇ ಒಂದರಷ್ಟು ಹೊಂದಿದೆ. ಇದು ಉತ್ತಮ ಸನ್ನಿವೇಶವೇ ಎಂದು ಅವರು ಪ್ರಶ್ನಿಸಿದರು.