ಬೆಳಗಾವಿ : ಭ್ರಷ್ಟಾಚಾರದ ಮೂಲಕ 63 ಲಕ್ಷ ರೂಪಾಯಿ ಹಣ ಸಂಪಾದಿಸಿದ್ದ ಬೀದರ್ ಸಾರಿಗೆ ವಿಭಾಗದ ಅಧಿಕಾರಿಗೆ ಬೆಳಗಾವಿಯ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 63 ಲಕ್ಷ ದಂಡ ವಿಧಿಸಿದೆ.
ಬೆಳಗಾವಿಯ 4ನೇ ಅಧಿಕ ಸತ್ರ ವಿಶೇಷ ನ್ಯಾಯಾಲಯದ ನ್ಯಾಯಧೀಶ ನಾರಾಯಣ ಪ್ರಭು ಬೀದರ್ ಜಿಲ್ಲೆಯ ಹುಮನಾಬಾದದ ಸಾರಿಗೆ ಇಲಾಖೆಯ ಸಹಾಯಕ ಸಾರಿಗೆ ಅಧಿಕಾರಿಯಾಗಿದ್ದ ಪಿ ಶಾಂತಕುಮಾರ ಮುನಿಸ್ವಾಮಿ ಎಂಬುವರಿಗೆ ಶಿಕ್ಷೆ ವಿಧಿಸಿದ್ದಾರೆ.
ಶಾಂತಕುಮಾರ ತಮ್ಮ ಆದಾಯಕ್ಕಿಂತ ಹೆಚ್ಚು ಹಣವನ್ನು ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಸಂಪಾದಿಸಿರುವದನ್ನು ಗುಪ್ತ ಮಾಹಿತಿ ಮೂಲಕ ಕಲೆಹಾಕಿದ್ದ ಬೆಳಗಾವಿಯ ಲೋಕಾಯುಕ್ತ ವಿಭಾಗ 03-05-2010ರಂದು ಅವರ ಬೀದರನ ಮನೆ ಮತ್ತು ಕಛೇರಿ ಮತ್ತು ಬೆಳಗಾವಿಯ ಆಂಜನೇಯ ನಗರದ ಮನೆಯ ಮೇಲೆ ದಾಳಿ ಮಾಡಿ ಅವರು 1 ಕೋಟಿ 14 ಲಕ್ಷ 62 ಸಾವಿರದ 121 ರೂಪಾಯಿ ಗಳಿಸಿರುವದು ಪತ್ತೆ ಹಚ್ಚಿ ಇದರಲ್ಲಿ 63 ಲಕ್ಷ ಭ್ರಷ್ಟಾಚಾರದಿಂದ ಹೊಂದಿರುವುದು ತನಿಖೆಯಿಂದ ತಿಳಿದು ಬಂದಿತ್ತು.
ಈ ಬಗ್ಗೆ ಬೆಳಗಾವಿಯ ನ್ಯಾಯಾಲಯದಲ್ಲಿ ದೋಷರೋಪ ಪಟ್ಟಿ ಸಲ್ಲಿಸಿತ್ತು. ಬೆಳಗಾವಿಯ ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಗಳಾದ ಆರ್ ಕೆ ಪಾಟೀಲ ಮತ್ತು ನಂತರ ಆರ್ ಬಿ ಹವಾಲ್ದಾರ ತನಿಖೆ ಕೈಗೊಂಡಿದ್ದರು.
ಶಿಕ್ಷೆ ಮತ್ತು ದಂಡಕ್ಕೊಳಗಾಗಿರುವ ಶಾಂತಕುಮಾರ ದಂಡ ಕಟ್ಟಲು ವಿಫಲವಾದರೆ ಅವರ ಮತ್ತು ಅವರ ಪತ್ನಿಯ ಹೆಸರಿನಲ್ಲಿರುವ ಚರ ಮತ್ತು ಸ್ಥಿರಾಸ್ತಿ ಮಾರಾಟ ಮಾಡಿ ಹಣ ಹೊಂದಿಸಲು ನ್ಯಾಯಾಲಯ ಆದೇಶಿಸಿದೆ.
ಸರಕಾರದ ಪರವಾಗಿ ಪ್ರವೀಣ ಅಗಸಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು ಎಂದು ಬೆಳಗಾವಿ ಲೋಕಾಯುಕ್ತ ಪೊಲೀಸ್ ಕಮಿಷನರ್ ಯಶೋದಾ ವಂಟಿಗುಡಿ ತಿಳಿಸಿದ್ದಾರೆ.