ಮುಂಬೈ, ೧೫ : ಬುಧವಾರ ನ್ಯೂಝಿಲ್ಯಾಂಡ್ ವಿರುದ್ಧದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸುವುದರೊಂದಿಗೆ ಶತಕಗಳ ಅರ್ಧಶತಕ ಪೂರೈಸಿ ಏಕದಿನ ಕ್ರಿಕೆಟ್ ನಲ್ಲಿ ಸರ್ವಕಾಲಿಕ ಶ್ರೇಷ್ಠ ದಾಖಲೆ ಮಾಡಿದರು.
ಮುಂಬೈನ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸಚಿನ ತೆಂಡೂಲ್ಕರ್ ಅವರು 452 ಪಂದ್ಯಗಳಲ್ಲಿ ಗಳಿಸಿದ್ದ 49 ಶತಕದ ದಾಖಲೆಯನ್ನು ಮುರಿದಿದ್ದಾರೆ.
ಸಚಿನ ತೆಂಡೂಲ್ಕರ್ 452 ಪಂದ್ಯಗಳಲ್ಲಿ 49 ಶತಕದೊಂದಿಗೆ ಅತೀ ಹೆಚ್ಚು ಶತಕ ಬಾರಿಸಿದ ಕ್ರಿಕೆಟಿಗರಾಗಿದ್ದರು. ಈ ದಾಖಲೆಯನ್ನು ವಿರಾಟ್ ಕೊಹ್ಲಿ ಅವರು 290 ಪಂದ್ಯಗಳಲ್ಲಿ ಮುರಿದು 50 ಏಕದಿನ ಶತಕ ಸಿಡಿಸಿದರು.
2023ರ ವಿಶ್ವಕಪ್‌ನಲ್ಲಿ ಕೊಹ್ಲಿ 711 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ ಒಂದೇ ವಿಶ್ವಕಪ್ ಟೂರ್ನಿಯಲ್ಲಿ 600+ ರನ್‌ಗಳನ್ನು ಗಳಿಸಿದ 3ನೇ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ವಿಶ್ವಕಪ್ ಟೂರ್ನಿಯಲ್ಲಿ, ಕೇವಲ 10 ಇನ್ನಿಂಗ್ಸ್ ನಲ್ಲಿ ಕೊಹ್ಲಿ ಗರಿಷ್ಠ ರನ್ ದಾಖಲಿಸಿರುವ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಸಚಿನ ತೆಂಡೂಲ್ಕರ 2023ರಲ್ಲಿ ಟೂರ್ನಿಯೊಂದರಲ್ಲಿ ಗರಿಷ್ಠ ಅರ್ಧ ಶತಕ ದಾಖಲಿಸಿದ್ದ ದಾಖಲೆಯನ್ನು ಈ ಹಿಂದೆ ಕೊಹ್ಲಿ ಮುರಿದಿದ್ದರು. ಸಚಿನ ತೆಂಡೂಲ್ಕರ 2003ರ ಟೂರ್ನಿಯಲ್ಲಿ 673ರನ್ ಗಳಿಸಿದ್ದರು. ವಿರಾಟ ಕೊಹ್ಲಿ ಸಾಧನೆಗೆ ಮೆಚ್ಚಿ ಸಚಿನ ತೆಂಡೂಲ್ಕರ ಅಭಿನಂದಿಸಿದ್ದಾರೆ.
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದಲ್ಲಿ ನಾಯಕ ರೋಹಿತ ಶರ್ಮಾ ವಿಕೆಟ್ ಪತನದ ಬಳಿಕ ವಿರಾಟ ಕೊಹ್ಲಿ ಬ್ಯಾಟಿಂಗ್ ಪ್ರಾರಂಭಿಸಿದ್ದರು. ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ದ 50 ಓವರ್ ಗಳಲ್ಲಿ 397 ರನ್ ಗುರಿ ನೀಡಿತು. ಶ್ರೇಯಸ್ ಅಯ್ಯರ 70 ಎಸೆತಗಳಲ್ಲಿ 105, ಶುಭಮನ್ ಗಿಲ್ 66 ಎಸೆತಗಳಲ್ಲಿ 80, ರೋಹಿತ ಶರ್ಮಾ 29 ಎಸೆತಗಳಲ್ಲಿ 47 ಹಾಗು ಕೆ. ಎಲ್. ರಾಹುಲ್ 20 ಎಸೆತಗಳಲ್ಲಿ 39 ರನ್ ಗಳಿಸಿದರು.