ಬೆಳಗಾವಿ : ಬಡ್ಡಿ ಲೇವಾದೇವಿ ವ್ಯವಹಾರಸ್ಥ ಸಂತೋಷ ಪದ್ಮಣ್ಣವರ ಕೊಲೆಯ ಪ್ರಮುಖ ಆರೋಪಿ, ಅವರ ಪತ್ನಿ ಉಮಾ ಸೇರಿದಂತೆ ಕೊಲೆಗೆ ನೇರವಾಗಿದ್ದ ಮಂಗಳೂರು ಮತ್ತು ಹುಬ್ಬಳ್ಳಿಯ ಇಬ್ಬರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಗುರುವಾರ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ಸಂತೋಷ ಪತ್ನಿ ಉಮಾ ಸೇರಿ ಮೂವರನ್ನು ಬೆಳಗಾವಿಯ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಬೆಳಗಾವಿ ಮಾಳ ಮಾರುತಿ ಪೊಲೀಸರು ಹಾಜರುಪಡಿಸಿದ್ದರು. ಹದಿನಾಲ್ಕು ದಿನ ನ್ಯಾಯಾಂಗ ಬಂಧನ ನೀಡಿದ ನ್ಯಾಯಾಧೀಶರು, ಆರೋಪಿ ಉಮಾ, ಫೇಸಬುಕ್ ಗೆಳೆಯ ಮಂಗಳೂರಿನ ಶೋಬೇಶ ಗೌಡ ಮತ್ತು ಹುಬ್ಬಳ್ಳಿಯ ಪವನ ಅವರನ್ನು ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.
ಕಳೆದ ದಿ. 9ರಂದು ಸಂತೋಷ ಅವರನ್ನು ಅವರ ಪತ್ನಿ ಉಮಾ ನೀರಿನಲ್ಲಿ ಹೆಚ್ಚು ನಿದ್ರೆ ಮಾತ್ರೆ ಸೇರಿಸಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿಸಿದ್ದರು. ನಂತರ ಅವರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲು ಯತ್ನಿಸಿದ್ದರು. ಆದರೆ ತನಗೆ ಅಷ್ಟು ಶಕ್ತಿ ಸಾಲದ್ದರಿಂದ ಬೆಳಗಾವಿಯಲ್ಲೇ ಬೀಡು ಬಿಟ್ಟಿದ್ದ ಮಂಗಳೂರಿನ ಶೋಬೇಶ ಗೌಡಗೆ ಕರೆ ಮಾಡಿ “ಎಲ್ಲ ಮಾಡಿದ್ದೇನೆ, ಆದರೆ ಅವನು ಇನ್ನೂ ಸತ್ತಿಲ್ಲ. ಬೇಗ ಬಾ,” ಎಂದು ತಿಳಿಸಿದ್ದಾಳೆ. ಮನೆಯ ಹತ್ತಿರವೇ ಕರೆಗಾಗಿ ಕಾಯುತ್ತಿದ್ದ ಶೋಬೇಶ ಗೌಡ, ತನ್ನ ಹುಬ್ಬಳ್ಳಿಯ ಸ್ನೇಹಿತ ಪವನನನ್ನು ಕರೆದುಕೊಂಡು ಹೋಗಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಹಾಕಿದ್ದಾರೆ. ಸಂತೋಷ ಸತ್ತದ್ದು ದೃಢವಾದ ನಂತರ ಮನೆಯಿಂದ ತೆರಳಿದ್ದರು.
ಬಳಿಕ ಪತಿ ಸಂತೋಷ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಬೆಂಗಳೂರಿನಲ್ಲಿದ್ದ ಮಗಳು ಸಂಜನಾ ಮತ್ತು ಸಂಬಧಿಕರಿಗೆ ಮಾಹಿತಿ ನೀಡಿ ತರಾತುರಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಳು. ತಾಯಿಯ ಮೇಲೆ ಸಂಶಯ ಬಂದು ದೂರು ನೀಡಿದ್ದ ಪುತ್ರಿ ಸಂಜನಾ ಪದ್ಮಣ್ಣವರ ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಕೇಸ್ ದಾಖಲಿಸಿ ತನಿಖೆ ನಡೆಸಿದ ಪೊಲೀಸರು. ಎರಡೇ ದಿನದಲ್ಲಿ ಕೊಲೆ ರಹಸ್ಯ ಭೇದಿಸಿದ ಮಾಳಮಾರುತಿ ಠಾಣೆ ಪೊಲೀಸರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.