ಬೆಳಗಾವಿ : ತಮ್ಮ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗುತ್ತಿತ್ತು ಹೀಗಾಗಿ ಹೆಚ್ಚಿನ ಹಾನಿ ತಡೆಯಲು ತಮ್ಮ ಹೇಳಿಕೆಯನ್ನು ಹಿಂಪಡೆಯುದಿರುವದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಪದದ ಅರ್ಥದ ಕುರಿತು ತಾವು ಖಾಸಗಿ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ದೇಶದಾದ್ಯಂತ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಯಿತು. ನೈಜ ಸುದ್ದಿ ಬಿಟ್ಟು ಬೇರೆ ಬೇರೆ ಆಯಾಮದಲ್ಲಿ ಚರ್ಚೆ ಆರಂಭವಾಯಿತು, ವೈಯಕ್ತಿಕವಾಗಿ ಪಕ್ಷಕ್ಕೆ ಹಾನಿ ಆಯಿತು. ತಮ್ಮನ್ನು ಮತ್ತು ತಮ್ಮ ಪಕ್ಷವನ್ನು ಹಿಂದೂ ವಿರೋಧಿಯೆಂದು ಬಿಂಬಿಸುವ ವ್ಯವಸ್ಥಿತ ಸಂಚು ಯೋಜಿಸಲಾಯಿತು ಎಂದರು.
ಪಕ್ಷಕ್ಕೆ ಹೆಚ್ಚಿನ ಹಾನಿಯಾಗದಿರಲೆಂದು ತಾವು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದು ಈ ವಿವಾದ ಇಲ್ಲಿಗೆ ಮುಗಿಯಲಿ. ಆದರೆ ತಮ್ಮ ಹೇಳಿಕೆಯ ನಂತರದ ಕುತಂತ್ರಗಳು, ತಿರುಚಿದ ವಿಷಯದ ಕುರಿತು ಚರ್ಚೆ ನಡೆಯುವದು ಅವಶ್ಯಕತೆಯಿದೆ. ಸರಕಾರ ಈ ವಿಷಯವನ್ನು ತನಿಖೆ ಮಾಡಬೇಕೆಂದು ತಾವು ಮುಖ್ಯಮಂತ್ರಿಗಳನ್ನು ಕೋರಿರುವದಾಗಿಯೂ ಅವರು ತಿಳಿಸಿದರು.
ಪಕ್ಷದ ರಾಷ್ಟ್ರ ಮತ್ತು ರಾಜ್ಯದ ನಾಯಕರು ತಮ್ಮ ಹೇಳಿಕೆಯನ್ನು ಖಂಡಿಸಿದ್ದು, ಆದರೆ ಯಾರೊಬ್ಬರೂ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಕೇಳಬೇಕೆಂದು ಸೂಚಿಸಿಲ್ಲ, ಆದರೆ ಜಿಲ್ಲೆಯ ತಮ್ಮ ಕೆಲ ಹಿತೈಷಿಗಳ ಸೂಚನೆ ಮೇರೆಗೆ ತಾವು ಹೇಳಿಕೆಯನ್ನು ಹಿಂದಕ್ಕೆ ಪಡೆದಿರುವದಾಗಿ ಸತೀಶ ತಿಳಿಸಿದರು.
ನನಗೆ ಪಕ್ಷ ದೊಡ್ಡದು. ಹೀಗಾಗಿ ಪಕ್ಷಕ್ಕೆ ಹಾನಿ ಆಗಬಾರದೆಂದು ಆ ಪದ ವಾಪಸ್ ಪಡೆದಿರುವೆ. ನನ್ನ ಮೇಲಿನ ಆರೋಪದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳು ನನ್ನ ಪತ್ರದ ತನಿಖೆ ಮಾಡಬೇಕು ಎಂದು ಸತೀಶ ಜಾರಕಿಹೊಳಿ ಆಗ್ರಹಿಸಿದರು.