ಬೆಳಗಾವಿ: ಕರ್ನಾಟಕ ಮರಾಠಾ ಮಹಾಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನೆ ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ಮಂಗಳವಾರ ನಡೆಯಿತು.
ಪ್ರವರ್ಗ 2ಎ ಮೀಸಲಾತಿಗಾಗಿ ಆಗ್ರಹಿಸಿ ಸುವರ್ಣಸೌಧ ಎದುರಿಗಿರುವ ಕೊಂಡಸಕೊಪ್ಪ ಬಳಿ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಬೆಂಬಲ ಸೂಚಿಸಲು ಸತೀಶ ಜಾರಕಿಹೊಳಿ ವೇದಿಕೆಗೆ ಬಂದಿದ್ದರು.
ಸತೀಶ ಜಾರಕಿಹೊಳಿ ಮಾತನಾಡಲು ಬಂದಾಗ, ಮರಾಠಾ ಮತ್ತು ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಹೀಗಾಗಿ ಭಾಷಣ ಬೇಡ ಎಂದು ಪ್ರತಿಭಟನಾ ನಿರತ ಮರಾಠಾ ಸಮುದಾಯದ ಕೆಲವರು ಅಡ್ಡಿಪಡಿಸಿದರು. ಜೈ ಶಿವಾಜಿ ಜೈ ಭವಾನಿ ಎಂದು ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದರು.
ವಿರೋಧದ ನಡುವೆ ಜಾರಕಿಹೊಳಿ ಕೆಲ ಕಾಲ ನಿಂತು ನಂತರ ಭಾಷಣ ಮುಗಿಸಿದರು. ನಂತರ ಪೊಲೀಸ್ ಭದ್ರತೆಯಲ್ಲಿ ಸತೀಶ ಜಾರಕಿಹೊಳಿ ಪ್ರತಿಭಟನೆಯಿಂದ ನಿರ್ಗಮಿಸಿದರು.