ಬೆಳಗಾವಿ : ಮೂಢನಂಬಿಕೆ, ಮಾಟ ಮಂತ್ರ ಮುಂತಾದ ಅನಿಷ್ಟಗಳನ್ನು ಸಮಾಜದಿಂದ ಹೊರಹಾಕಲು ಸ್ವತಃ ಮಾದರಿಯಾಗುತ್ತಿರುವ ಪ್ರಗತಿಶೀಲ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಪುನಃ ಖಂಡಿತವಾಗಿ ಅಧಿಕಾರ ಪಡೆಯುವ ಭರವಸೆಯಿಂದ ತಾವು 2020ರಲ್ಲಿ ಖರೀದಿಸಿದ್ದ ಕಾರಿಗೆ 2023 ನಂಬರ್ ಪಡೆದುಕೊಂಡಿದ್ದರು. ಅಲ್ಲದೇ ಆ ವಾಹನದ ಮೊದಲ ಸಂಚಾರವನ್ನು ಸದಾಶಿವ ನಗರದ ಸ್ಮಶಾನದಿಂದಲೇ ಪ್ರಾರಂಭಿಸಿದ್ದರು.
ಇದೀಗ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆದಿದೆ. ಹಾಗಾಗಿ ಅವರು ಆ ಕಾರಿನ ನಂಬರ್ ಪಡೆದ ಹಿನ್ನಲೆಯನ್ನು ಪುನಃ ಮೆಲಕು ಹಾಕಿದ್ದಾರೆ. ಅವರ ಕಾರಿನ ಸಂಖ್ಯೆ KA 49, N 2023
ಗೋಕಾಕ ರಾಜ್ಯ ಸಾರಿಗೆ ಇಲಾಖೆ ಕಚೇರಿಯಿಂದ ನೋಂದಣಿ ಮಾಡಿಸಲಾಗಿದೆ.
ಹೊಸ ವಾಹನ ಕೊಂಡ ನಂತರ ಮೊದಲು ಗುಡಿಗಳಿಗೂ, ಮನೆಗೋ, ಪುರೋಹಿತರ ಮನೆಗೋ ತೆಗೆದುಕೊಂಡು ಹೋಗಿ ಅವರಿಂದ ಪೂಜೆ ಮಾಡಿಸಿ ಬಳಸುವುದು ಹಿಂದೂ ಸಂಪ್ರದಾಯ. ಪೂಜೆ ಮಾಡದೇ ಬಳಸಲು ಪ್ರಾರಂಭಿಸಿದರೆ ಅನಾಹುತವಾಗುವುದು ಖಂಡಿತ ಎಂಬ ಅನಿಸಿಕೆ ಮೂಢನಂಬಿಕೆಯನ್ನು ಹುಸಿ ಮಾಡಲೆಂದೇ ಸತೀಶ ಅವರು ಇಂತವುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡು ಅವುಗಳನ್ನು ಪಾಲಿಸುವುದರಿಂದ ಏನೂ ಆಗುವದಿಲ್ಲವೆಂದು ಸಾಬೀತು ಪಡಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಖರೀದಿಸಿ ಸ್ಮಶಾನದಿಂದ ಓಡಾಟ ಆರಂಭಿಸಿದ್ದ ಕಾರ್ KA 49 N 2023 ಮತ್ತು ಅದರಲ್ಲಿ ಪ್ರಯಾಣಿಸಿರುವ ಎಲ್ಲರೂ ಈ ವರೆಗೂ ಕ್ಷೇಮವಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ತರದ ಪಾಲನೆಗಳು ಪುರೋಹಿತ ವರ್ಗಗಳ ಜೀವನ ಪಾಲನೆಗೆ ಇವೆ. ಅವರ ಉಪಜೀವನಕ್ಕೆ ಈ ವರ್ಗಗಳ ಜನರಿಗೆ ಅವರು ಪಾಲಿಸದಿದ್ದರೆ ಅಪಾಯ ನಾಶ ನಿಶ್ಚಿತವೆಂದು ಹೆದರಿಸಿ ಪಾಲಿಸುವಂತೆ ಮಾಡುತ್ತಿದ್ದಾರೆ, ಆದರಿಂದ ಅವರು ಹೇಳುವುದನ್ನು ಪಾಲಿಸಬೇಡಿ. ಎಲ್ಲಕ್ಕಿಂತ ಅವರ ಬಳಿಗೆ ಹೋಗುವುದನ್ನೇ ಬಿಡಿ ಎಂದು ಕರೆ ನೀಡಿದರು.
ಕಾರು ಕೊಂಡ 2020ರಲ್ಲಿ ಸದಾಶಿವ ನಗರದ ಸ್ಮಶಾನದಲ್ಲಿ ಒಂದು ಪುಟ್ಟ ಕಾರ್ಯಕ್ರಮವನ್ನು ಏರ್ಪಡಿಸಿ ಮೂಢನಂಬಿಕೆ, ಕಂದಾಚಾರ, ಮಾಟ ಮಂತ್ರ ಮುಂತಾದವುಗಳು ಸುಳ್ಳು, ಧಾರ್ಮಿಕ ಕಂದಾಚಾರಗಳಿಂದ ತುಂಬಿವೆ. ದಲಿತರು, ಬಡವರು, ಹಿಂದುಳಿದ ವರ್ಗಗಳಿಗೆ ಸೇರಿದವರು ಇವುಗಳನ್ನು ಪಾಲಿಸಬೇಡಿ ಎಂದು ವಿನಂತಿಸಿಕೊಂಡಿದ್ದರು.
ಸಮಾಧಿ, ಸ್ಮಶಾನದ ಕುರಿತು ಸಾಮಾನ್ಯರಲ್ಲಿರುವ ಭಯ, ಮೂಢನಂಬಿಕೆ ದೂರ ಮಾಡಲೆಂದೇ ಜಾರಕಿಹೊಳಿ ಪ್ರತಿವರ್ಷ ಅಂಬೇಡ್ಕರ ಮಹಾಪರಿ ನಿರ್ವಾಣ ದಿನವಾದ ಡಿಸೆಂಬರ 6 ರಂದು ಸದಾಶಿವ ನಗರದ ಸ್ಮಶಾನದಲ್ಲಿ ಮೂಢನಂಬಿಕೆ ವಿರುದ್ಧದ ಕುರಿತು ಜಾಗೃತಿ ಮೂಡಿಸಲು ಒಂದು ದಿನದ ಕಾರ್ಯಕ್ರಮ ಏರ್ಪಡಿಸಿ ಸ್ವತಃ ತಾವೇ 24 ತಾಸು ಹಗಲು ರಾತ್ರಿ ಊಟ, ಉಪಹಾರ ಮಾಡಿ ರಾತ್ರಿ ಅಲ್ಲೇ ತಂಗಿದ್ದು ಇತರರಿಗೆ ಮಾದರಿಯಾಗಿದ್ದಾರೆ.