ಬೆಳಗಾವಿ : ಅಥಣಿಯಿಂದ ಸ್ಪರ್ಧಿಸಲು ಟಿಕೆಟ್ ದೊರೆಯದೇ ಬಿಜೆಪಿ ತೊರೆಯಲು ನಿರ್ಧರಿಸಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಶುಕ್ರವಾರ ಮುಂಜಾನೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದರು.
ವಿಶೇಷ ವಿಮಾನವನ್ನು ರಾಜ್ಯ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ ಅವರು ಒದಗಿಸಿಕೊಟ್ಟಿದ್ದರು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸವದಿಯವರನ್ನು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಸ್ವಾಗತಿಸಿ ಅವರೊಂದಿಗೆ ಬೆಂಗಳೂರಿಗೆ ತೆರಳಿದರು.
ಮೂರು ಬಾರಿ ಅಥಣಿಯಿಂದ ಬಿಜೆಪಿ ಶಾಸಕರಾಗಿದ್ದ ಸವದಿ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಹೇಶ ಕುಮಟೋಳ್ಳಿ ವಿರುದ್ಧ ಸೋತ ನಂತರ ಬಿಜೆಪಿಯಿಂದ ವಿಧಾನ ಪರಿಷತ್ ಗೆ ಆರು ವರುಷದ ಅವಧಿಗೆ ಚುನಾಯಿತರಾಗಿದ್ದರು.
ಬೆಂಗಳೂರಿಗೆ ತೆರಳಲು ಸಿದ್ದ ಪಡಿಸಿರುವ ಪರಿಷತ್ ರಾಜೀನಾಮೆ ಪತ್ರವನ್ನೂ ತೆಗೆದುಕೊಂಡು ಹೋಗಿದ್ದು ಮೊದಲು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮಧ್ಯಾಹ್ನ 3 ಗಂಟೆಗೆ ಪರಿಷತ್ ಸಭಾಪತಿಯವರಿಗೆ ರಾಜೀಮ ಪತ್ರ ಸಲ್ಲಿಸಲಿದ್ದಾರೆ.
ಸವದಿ ಶುಕ್ರವಾರವೇ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಪ್ರಕಟಿಸಲಿದ್ದು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಸವದಿಯವರಿಗೆಂದೇ ಕಾಂಗ್ರೆಸ್ ಅಥಣಿ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ನಿರ್ಧಾರಿಸಿಲ್ಲ. ಸವದಿ ಕಾಂಗ್ರೆಸ್ ಸೇರುವದು ಸ್ವಾಗತಾರ್ಹವೇ ಆದರೆ ಅವರನ್ನು ಅಥಣಿಯಿಂದ ಸ್ಪರ್ಧೆಗಿಳಿಸಿದರೆ ಇಲ್ಲಿಯವರೆಗೂ ಅವರನ್ನು ವಿರೋಧಿಸಿ ಪಕ್ಷ ಕಟ್ಟಿ ಬೆಳಸಿದವರಿಗೆ ಅನ್ಯಾಯ ಮಾಡಿದಂತೆ ಎಂದು ಕಾಂಗ್ರೆಸ್ ನ ಬಹುತೇಕ ಕಾರ್ಯಕರ್ತರು ಮತ್ತು ಸ್ಪರ್ಧಾಕಾಂಕ್ಷಿಗಳು ಬೇಸರ ಮತ್ತು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಆದರೆ ರಾಜಕೀಯದಲ್ಲಿ ಅಧಿಕಾರದಲ್ಲಿರುವುದು ಮುಖ್ಯವಾಗಿರುವದರಿಂದ ಇಂತಹ ಸ್ಥಿತಿಯಲ್ಲಿ ಹೊಂದಾಣಿಕೆ ಅಗತ್ಯವಾಗಿರುತ್ತದೆ.
ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಅಥಣಿಯಿಂದ ಸ್ಪರ್ಧಿಸುವ ಕುರಿತು ಸಮದರ್ಶಿ ಮೊದಲು ಪ್ರಕಟಿಸಿತ್ತು.