ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಭಗವಾನ್ ಅವರು ವಿಪರೀತ ಶೀತದಿಂದ ಬಳಲುತ್ತಿದ್ದು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿರುವ ಹಿನ್ನೆಲೆ ಐಸಿಯುನಲ್ಲಿ ದಾಖಲಿಸಿ ಡಾ. ಮಂಜುನಾಥ ಅವರ ನೇತೃತ್ವದಲ್ಲಿ ಭಗವಾನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
89 ವರ್ಷ ವಯಸ್ಸಿನ ಶ್ರೀನಿವಾಸ ಕೃಷ್ಣ ಅಯ್ಯಂಗಾರ ಭಗವಾನ್ ಅವರು ಕನ್ನಡ ಚಿತ್ರರಂಗದಲ್ಲಿ ಭಗವಾನ್ ಎಂದೇ ಪ್ರಸಿದ್ಧಿಯಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಕನ್ನಡ ಸಿನಿರಂಗದಲ್ಲಿ ಖ್ಯಾತ ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಗುರುತಿಸಿಕೊಂಡಿದ್ದಾರೆ.
ಭಗವಾನ್ ಅವರು 1966ರಲ್ಲಿ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರರಾಗಿ ನಿರ್ದೇಶನ ಪ್ರಾರಂಭಿಸಿದ್ದರು.
ಈ ಜೋಡಿ ಸುಮಾರು 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿತ್ತು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿ ಕನ್ಯೆ, ಚಂದನದ ಗೊಂಬೆ, ವಸಂತ ಗೀತ, ಆಪರೇಷನ್ ಡೈಮಂಡ್ ರಾಕೆಟ್, ಹೊಸ ಬೆಳಕು, ಯಾರಿವನು, ಮಾಂಗಲ್ಯ ಬಂಧನ, ನಾನೊಬ್ಬ ಕಳ್ಳ, ಗಾಳಿ ಮಾತು, ಬೆಂಕಿಯ ಬಲೆ, ಜೀವನ ಚೈತ್ರ ಮುಂತಾದ ಜನಪ್ರಿಯ ಚಿತ್ರಗಳನ್ನು ದೊರೈ ಭಗವಾನ್ ಜೋಡಿ ನಿರ್ದೇಶನ ಮಾಡಿತ್ತು.
ಡಾ.ರಾಜಕುಮಾರ ಕುಟುಂಬಕ್ಕೆ ದೊರೈ – ಭಗವಾನ್ ಜೋಡಿ ತೀರಾ ಹತ್ತಿರವಾಗಿತ್ತು. ದೊರೈ – ಭಗವಾನ್ ನಿರ್ದೇಶನದ 30 ಚಿತ್ರಗಳಲ್ಲಿ ಡಾ.ರಾಜಕುಮಾರ ನಾಯಕರಾಗಿ ಅಭಿನಯಿಸಿರುವುದು ಒಂದು ದಾಖಲೆ ಅನ್ನಬಹುದು. ಡಾ.ರಾಜಕುಮಾರ ಕುಟುಂಬದ ಮೂರು ತಲೆಮಾರುಗಳ ಜೊತೆಗೆ ಎಸ್.ಕೆ.ಭಗವಾನ್ ಕೆಲಸ ಮಾಡಿರುವುದೂ ಸಹ ವಿಶೇಷ..
ಡಾ.ರಾಜಕುಮಾರ, ಉದಯ ಕುಮಾರ, ನರಸಿಂಹರಾಜು, ಲಕ್ಷ್ಮೀ, ಆರತಿ, ಜಯಂತಿ, ರಾಜೇಶ, ಕಲ್ಪನಾ, ಮಂಜುಳ, ಶಂಕರ ನಾಗ್, ಬಿ.ಸರೋಜಾ ದೇವಿ, ಡಾ.ವಿಷ್ಣುವರ್ಧನ, ಮಾಲಾಶ್ರೀ, ಅಂಬರೀಶ, ಪುನೀತ ರಾಜಕುಮಾರ ಸೇರಿದಂತೆ ದಿಗ್ಗಜ ನಟ-ನಟಿಯರೊಂದಿಗೆ ಎಸ್.ಕೆ.ಭಗವಾನ್ ಕೆಲಸ ಮಾಡಿದ್ದಾರೆ.
ಸುಮಾರು 65 ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಎಸ್.ಕೆ.ಭಗವಾನ್ ಅವರು, ದೊರೈರಾಜ್ ನಿಧನದ ಬಳಿಕ ಸಿನಿಮಾ ನಿರ್ದೇಶನದಿಂದ ದೂರ ಉಳಿದರು.
ಎಸ್.ಕೆ.ಭಗವಾನ್ ಅವರಿಗೆ ದಾದಾ ಸಾಹೇಬ ಫಾಲ್ಕೆ ಅಕಾಡೆಮಿ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ರಾಜಕುಮಾರ ಸೌಹಾರ್ದ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.