ಹೊಸದಿಲ್ಲಿ, ಎ. 30: ಕೊರೊನಾ ಸಮಯದಲ್ಲಿ ಕೋವಿಶೀಲ್ಡ ಲಸಿಕೆ ತಯಾರಿಕಾ ಸಂಸ್ಥೆ Oxford-AstraZeneca ಆಘಾತಕಾರಿ ಮಾಹಿತಿಯನ್ನು ಕೋರ್ಟ ಮುಂದೆ ಒಪ್ಪಿಕೊಂಡಿದೆ. ತಾನು ಅಭಿವೃದ್ಧಿಪಡಿಸಿ ಕೋಟ್ಯಾಂತರ ಜನರಿಗೆ ನೀಡಿರುವ ಕೋವಿಶೀಲ್ಡ ಕೊರೊನಾ ಲಸಿಕೆಯು ಗಂಭೀರ ಅಡ್ಡಪರಿಣಾಮ ಉಂಟು ಮಾಡಬಹುದು ಎಂದು ಮೊದಲ ಬಾರಿಗೆ ಒಪ್ಪಿಕೊಂಡಿದೆ.
ಕೋವಿಶೀಲ್ಡ ಮತ್ತು ವ್ಯಾಕ್ಸಝೇವ್ರಿಯಾ ಬ್ರಾಂಡ್ ಹೆಸರಲ್ಲಿ ಕೊರೊನಾ ಲಸಿಕೆಯನ್ನು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅಸ್ಟ್ರಾಝೆನೆಕಾ ಮಾರಾಟ ಮಾಡಿತ್ತು. ಈ ಲಸಿಕೆಯಿಂದ ಟಿಟಿಎಸ್ ನಂತಹ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಆದರೆ ಇದು ತುಂಬಾನೇ ಅಪರೂಪ ಎಂದು ಲಂಡನ್ ಕೋರ್ಟ ಮುಂದೆ ಕಂಪನಿ ಹೇಳಿದೆ.
ಟಿಟಿಎಸ್ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಪ್ಲೇಟಲೆಟ್ಸ ದಿನದಿಂದ ದಿನಕ್ಕೆ ಕುಸಿಯಲು ಆರಂಭಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಸ್ಟ್ರೋಕ್ ಅಥವಾ ಹೃದಯ ಸ್ತಂಭನದ ಸಾಧ್ಯತೆಗಳು ಹೆಚ್ಚಾಗುತ್ತದೆ.
ಈ ವರ್ಷದ ಫೆಬ್ರವರಿಯಲ್ಲಿ ಬ್ರಿಟನ್ ಹೈಕೋರ್ಟನಲ್ಲಿ ವಿಚಾರಣೆ ನಡೆದಿತ್ತು. ಈ ವೇಳೆ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ AstraZeneca ಒಪ್ಪಿಕೊಂಡಿದೆ.
ಲಸಿಕೆಯಿಂದ ಉಂಟಾಗುವ ಗಂಭೀರವಾದ ಗಾಯಗಳು ಮತ್ತು ಸಾವುಗಳನ್ನು ಆರೋಪಿಸಿ ಔಷಧೀಯ ಕಂಪನಿಯು ಕ್ಲಾಸ್-ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಅಸ್ಟ್ರಾಜೆನೆಕಾ ಲಸಿಕೆ ಅಡ್ಡ ಪರಿಣಾಮಗಳು ವಿನಾಶಕಾರಿ ಪರಿಣಾಮಗಳನ್ನು ಬೀರಿವೆ ಎಂದು ಹಲವಾರು ಕುಟುಂಬಗಳು ನ್ಯಾಯಾಲಯದ ದೂರಿನ ಮೂಲಕ ಆರೋಪಿಸಿವೆ.
ಕಂಪನಿ ತನ್ನ ಲಸಿಕೆಯ ಅಡ್ಡಪರಿಣಾಮ ಒಪ್ಪಿಕೊಂಡಿರುವ ಕಾರಣ ಪ್ರಸ್ತುತ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಇದು ಪ್ರಮುಖ ತಿರುವು ಎನ್ನಲಾಗಿದೆ. ವ್ಯಾಕ್ಸಿನೇಷನ್ಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ಇದು ಎತ್ತಿ ತೋರಿಸಿದೆ.
ಏಪ್ರಿಲ್ 2021 ರಲ್ಲಿ ಅಸ್ಟ್ರಾಜೆನೆಕಾ ಲಸಿಕೆಯನ್ನು ಪಡೆದ ನಂತರ ಶಾಶ್ವತವಾಗಿ ಮೆದುಳಿಗೆ ಸಂಬಂಧಪಟ್ಟ ಕಾಯಿಲೆ ಎದುರಿಸಿದ ಜೇಮೀ ಸ್ಕಾಟ್ ಅವರು ಮೊಕದ್ದಮೆಯನ್ನು ಪ್ರಾರಂಭಿಸಿದರು. ಅವರ ಪ್ರಕರಣವು ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮದ ತೀವ್ರ ಪರಿಣಾಮವನ್ನು ತೋರಿಸುತ್ತದೆ, ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್ಲೆಟ್ ಸಮಸ್ಯೆಗಳಿಂದ ಗುರುತಿಸಿಕೊಂಡಿದೆ.
ಇಂಗ್ಲೆಂಡ್ ಹೈಕೋರ್ಟ್ಗೆ ಸಲ್ಲಿಸಿದ ಕಾನೂನು ದಾಖಲೆಗಳಲ್ಲಿ, ಅಸ್ಟ್ರಾಜೆನೆಕಾ ತನ್ನ ಲಸಿಕೆ “ಅಪರೂಪದ ಸಂದರ್ಭಗಳಲ್ಲಿ ಟಿಟಿಎಸ್ಗೆ ಕಾರಣವಾಗಬಹುದು” ಎಂದು ಒಪ್ಪಿಕೊಂಡಿದೆ. ಹಾಗೇನಾದರೂ ಕೆಲವು ಪ್ರಕರಣಗಳಲ್ಲಿ ವ್ಯಕ್ತಿಯ ಅನಾರೋಗ್ಯ ಹಾಗೂ ಸಾವಿಗೆ ಕಂಪನಿಯ ಲಸಿಕೆ ಕಾರಣ ಎಂದಾದಲ್ಲಿ ದೊಡ್ಡ ಮಟ್ಟದ ಪರಿಹಾರ ಹಣವನ್ನು ಕಂಪನಿ ಪಾವತಿ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಲಿದೆ.
ಅಸ್ಟ್ರಾಜೆನೆಕಾದ ಅಡ್ಡ ಪರಿಣಾಮ ಒಪ್ಪಿಕೊಂಡ ಹೊರತಾಗಿಯೂ, ತನ್ನ ಲಿಸಿಕೆ ಈಗಲೂ ಕೋವಿಡ್ಗೆ ಪರಿಣಾಮಕಾರಿ ಎಂದು ಹೇಳಿರುವುದು ಕಂಪನಿ ಕೂಡ ಕಾನೂನು ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಆಸ್ಟ್ರಾಜೆನಿಕಾ ಜೊತೆ ಮಾಡಿಕೊಂಡ ಒಪ್ಪಂದದ ಬಳಿಕ ಕೋವಿಶೀಲ್ಡ್ ಲಸಿಕೆಯನ್ನು ಮಾರಾಟ ಮಾಡಿತ್ತು.