ಬೆಳಗಾವಿಯಲ್ಲಿ ಐಫೋನ್ ಬಿಡಿ ಭಾಗ ತಯಾರಿಸಲು ಎಸ್ ಎಫ್ ಎಸ್ ಕಂಪನಿಯ ಪ್ರಸ್ತಾಪ

A B Dharwadkar
ಬೆಳಗಾವಿಯಲ್ಲಿ ಐಫೋನ್ ಬಿಡಿ ಭಾಗ ತಯಾರಿಸಲು ಎಸ್ ಎಫ್ ಎಸ್  ಕಂಪನಿಯ ಪ್ರಸ್ತಾಪ

ಬೆಂಗಳೂರು: ಐ ಫೋನ್ ಫೋನ್ ತಯಾರಿಸುವ ಫಾಕ್ಸ್‌ಕಾನ್‌ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುವ ಎಸ್‌ಎಫ್‌ಎಸ್‌ ಕಂಪನಿಯು ಬೆಳಗಾವಿಯಲ್ಲಿ 250 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದ್ದು, ಇದಕ್ಕಾಗಿ 30 ಎಕರೆ ಭೂಮಿಯನ್ನು ಕೇಳಿದೆ.

ಇದೊಂದು ಸ್ವಾಗತಾರ್ಹ ಪ್ರಸ್ತಾವನೆಯಾಗಿದ್ದು, ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ತಮ್ಮನ್ನು ಬುಧವಾರ ಭೇಟಿಯಾಗಿದ್ದ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಫಾರಸ್ ಶಾ ನೇತೃತ್ವದ ನಿಯೋಗದ ಬೇಡಿಕೆಗಳನ್ನು ಕೇಳಿದ ಅವರು ಈ ಭರವಸೆ ನೀಡಿದ್ದಾರೆ.

ಎಸ್‌ಎಫ್‌ಎಸ್‌ ಕಂಪನಿ ಈಗಾಗಲೇ ಬೆಳಗಾವಿಯಲ್ಲಿ ಏರೋಸ್ಪೇಸ್‌ ಉದ್ಯಮಕ್ಕೆ ಬೇಕಾಗುವ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಈಗ ಅದು ಆಪಲ್‌ ಫೋನ್‌ಗೆ ಬೇಕಾಗುವ ಬಿಡಿಭಾಗಗಳ ತಯಾರಿಕಾ ಘಟಕವನ್ನು ರಾಜ್ಯದಲ್ಲಿ ತೆರೆಯಲು ಮನಸ್ಸು ಮಾಡಿದೆ. ಇದರಿಂದ ಮುಂದಿನ ಮೂರು ವರ್ಷಗಳಲ್ಲಿ 500 ಜನ ತಂತ್ರಜ್ಞರಿಗೆ ಉದ್ಯೋಗ ಸಿಗಲಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ. ಇದರ ಜತೆಗೆ ಪರೋಕ್ಷವಾಗಿ ನೂರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ರಾಜ್ಯದ ಆರ್ಥಿಕತೆಗೂ ಲಾಭವಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಬೆಳಗಾವಿಯನ್ನು ರಾಜ್ಯದ ಪ್ರಮುಖ ಉದ್ಯಮ ವಲಯಗಳಲ್ಲಿ ಒಂದಾಗಿ ಬೆಳೆಸಲಾಗುತ್ತಿದೆ. ಅಲ್ಲಿ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ. ಇದು ಮುಂಬೈ-ಬೆಂಗಳೂರು-ಚೆನ್ನೈ ಕಾರಿಡಾರ್‍‌ನಲ್ಲಿ ಬರುವುದರಿಂದ ಔದ್ಯಮಿಕ ಬೆಳವಣಿಗೆಗೆ ಅಪಾರ ಅವಕಾಶಗಳಿವೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರಕಾರವು ತೀರ್ಮಾನಿಸಿದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಎಸ್‌ ಕಂಪನಿಯ ನಿರ್ದೇಶಕ ಪ್ರಶಾಂತ್‌ ಕೋರೆ, ಕೈಗಾರಿಕಾ ಇಲಾಖೆ ಅಯುಕ್ತೆ ಗುಂಜನ್‌ ಕೃಷ್ಣ ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.