ಹುಬ್ಬಳ್ಳಿ, ೧೪: “ಬೆಳಗಾವಿಯಿಂದ ಸ್ಪರ್ಧಿಸಿದರೆ ಗೆಲುವು ಕಷ್ಟ. ಅದಕ್ಕೆ ಸ್ಪರ್ಧಿಸಬೇಡಿ” ಎಂದು ಹಿತೈಷಿ ಮತ್ತು ಹಿರಿಯ ಪತ್ರಕರ್ತರಿಂದ ಸಲಹೆ ಪಡೆದಿದ್ದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಈಗ ಅಕ್ಷರಶ ‘ಅಡ್ಡ ಕತ್ತರಿ’ ಯಲ್ಲಿ ಸಿಲುಕ್ಕಿದ್ದಾರೆ.
ಬಿಜೆಪಿಯ ನಂಬರ್ 2 ನಾಯಕ, ಕೇಂದ್ರ ಗೃಹ ಸಚಿವ ಅಮಿತ ಶಾ ಗುರುವಾರ ಮುಂಜಾನೆ ಫೋನ್ ಮಾಡಿ “ಹಾವೇರಿ, ಧಾರವಾಡ-ಹುಬ್ಬಳ್ಳಿ ಕ್ಷೇತ್ರ ಸಿಗದಿದ್ದರಿಂದ ಬೇಸರಗೊಳ್ಳಬೇಡಿ, ಬೆಳಗಾವಿಯಲ್ಲಿ ತಮ್ಮ ಬೀಗರಿದ್ದಾರೆ. ಅಲ್ಲಿಂದ ಸ್ಪರ್ಧೆಸಿ, ತಮ್ಮ ಗೆಲುವಿಗೆ ಎಲ್ಲ ವ್ಯವಸ್ಥೆ ಪಕ್ಷ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಆದರೆ, ಬೆಳಗಾವಿಯಿಂದ ಸ್ಪರ್ಧಿಸಿದರೆ ಗೆಲವು ಸಾಧ್ಯವಿಲ್ಲವೆಂದು ಅರಿತಿರುವ ಶೆಟ್ಟರ್, “ನನಗೆ ಸ್ವಲ್ಪ ಸಮಯ ನೀಡಿ ತಿಳಿಸುವೆ,” ಎಂದು ಶಾಗೆ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಷಾ ಗೆ ಈ ಥರದ ಪ್ರತ್ಯುತ್ತರ ನೀಡಿದ ರಾಜ್ಯ ಬಿಜೆಪಿಯ ಮೊದಲ ಗಟ್ಟಿಗ ಎಂಬ ಪ್ರಶಂಸೆ ಬರುತ್ತಿದ್ದು ಶೆಟ್ಟರ್ ಅಭಿನಂದನೆಗೆ ಅರ್ಹರು ಎಂದು ಬಿಜೆಪಿಯ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಹಾವೇರಿ ಮತ್ತು ಧಾರವಾಡ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ದೊರೆಯದೇ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮನವೊಲಿಕೆಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ ಷಾ ಅಖಾಡಕ್ಕೆ ಇಳಿದಿದ್ದಾರೆ. ಶೆಟ್ಟರ್ಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಅಮಿತ ಶಾ, ಬೆಳಗಾವಿಯಿಂದ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿದ್ದಾರೆ. ಸದ್ಯ ಬಿಜೆಪಿ 20 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮುಂದಿನ ಹಂತದ ಅಭ್ಯರ್ಥಿ ಆಯ್ಕೆ ವೇಳೆ ಶೆಟ್ಟರರನ್ನು ಬೆಳಗಾವಿಯಿಂದ ಅಭ್ಯರ್ಥಿಯನ್ನಾಗಿ ಪರಿಗಣಿಸುವ ಸುಳಿವು ನೀಡಿದೆ.
ಅಮಿತ ಶಾ ಜೊತೆ ಮಾತನಾಡಿರುವ ಶೆಟ್ಟರ್ ಅವರು ಬೆಳಗಾವಿಯಿಂದ ಸ್ಪರ್ಧೆ ಮಾಡುವ ಬಗ್ಗೆ ಯೋಚಿಸಲು ಕಾಲಾವಕಾಶ ಕೇಳಿದ್ದಾರೆ. ಬೆಳಗಾವಿಯಿಂದ ಸ್ಪರ್ಧಿಸಿದರೆ ಸೋಲುವ ಬಗ್ಗೆ ಶೆಟ್ಟರ್ಗೆ ಭೀತಿ ಇದೆ ಎನ್ನಲಾಗಿದೆ. ಅದಕ್ಕೆ ಅವರು ಕಾಲಾವಕಾಶ ಕೇಳಿರುವ ಸಾಧ್ಯತೆ ಇದೆ. ಆದರೆ ಖುದ್ದು ಅಮಿತ ಶಾ ಸೂಚನೆ ನೀಡಿರುವುದರಿಂದ ಶೆಟ್ಟರ್ ಪರಿಸ್ಥಿತಿ ಅಡ್ಡ ಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಕಳೆದ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಶೆಟ್ಟರ್, ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಅವರನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಕಾಂಗ್ರೆಸ್ ಮಾಡಿತ್ತು. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೆ ಬಿಜೆಪಿ ಪರ ವಾಲಿದ್ದ ಶೆಟ್ಟರ್, ಲೋಕಸಭೆ ಟಿಕೆಟ್ ಆಕಾಂಕ್ಷಿಯೊಂದಿಗೆ ಘರ್ ವಾಪ್ಸಿ ಆಗಿದ್ದರು. ಮರಳಿ ಬಿಜೆಪಿ ಸೇರುವ ಸಂದರ್ಭ ಅವರು ಧಾರವಾಡ ಅಥವಾ ಹಾವೇರಿಯಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ಇದೀಗ ಆ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಧಾರವಾಡದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯನ್ನು ಕಣಕ್ಕಿಳಿಸಲಾಗಿದ್ದರೆ, ಹಾವೇರಿಯಿಂದ ಮಾಜಿ ಮುಖ್ಯಮಂತ್ರಿ ಬಬಸವರಾಜ ಬೊಮ್ಮಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದರಿಂದ ಶೆಟ್ಟರ್ ನಿರಾಸೆಗೊಂಡಿದ್ದಾರೆ.