ಬೆಳಗಾವಿ : ಗಡಿ ವಿವಾದದ ಬಿಸಿ ಇನ್ನೂ ಆರುವದಕ್ಕೆ ಮೊದಲೇ ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ನ ಶಾಸಕ ಹಾಗು ಶರದ ಪವಾರ ಮೊಮ್ಮಗ ರೋಹಿತ ಪವಾರ ಅವರು ಮಂಗಳವಾರ ಬೆಳಗಾವಿಗೆ ನೀಡಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರೊಂದಿಗೆ ಚರ್ಚಿಸಿದರು.
ಬೆಳಗಾವಿಗೆ ದಿಢೀರ್ ಭೇಟಿ ನೀಡಿದ ಶಾಸಕ ರೋಹಿತ ಪವಾರ ಅವರು, ಬೆಳಗಾವಿ ನಗರ ಸೇರಿದಂತೆ ಯಳ್ಳೂರು ಹೀಗೆ ವಿವಿಧ ಕಡೆಗೆ ಭೇಟಿ ನೀಡಿ ಮರಾಠಿ ಭಾಷಿಕರ ಸಮಸ್ಯೆ ಆಲಿಸಿದರು.
ರಾಷ್ಟ್ರವಾದಿ ಕಾಂಗ್ರೆಸ್ ನ ಮುಖಂಡ ಶರದ ಪವಾರ ಅವರ ಸಹೋದರನ ಪುತ್ರರಾಗಿರುವ ರೋಹಿತ ಅವರು, ನಗರದ ವಿವಿಧ ಪ್ರದೇಶಕ್ಕೆ ತೆರಳಿ ಮರಾಠಿಗರ ಸಮಸ್ಯೆ ಆಲಿಸಿದರು. ಎಂಇಎಸ್ ಮುಖಂಡ ದೀಪಕ ದಳವಿ ಮನೆಗೆ ತೆರಳಿ ಮಾತುಕತೆ ನಡೆಸಿದರು. ಇದಕ್ಕೂ ಮೊದಲು ಹುತಾತ್ಮ ಚೌಕ ಬಳಿ ಬಂದು ಎಂಇಎಸ್ ನಾಯಕರನ್ನು ಭೇಟಿಯಾದರು.
ಶಹಾಪುರ ಉದ್ಯಾನದಲ್ಲಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸುಪ್ರೀಮ ಕೋರ್ಟನಲ್ಲಿ ಬೆಳಗಾವಿ ಗಡಿ ವಿವಾದ ಯಾವ ಹಂತದಲ್ಲಿದೆ, ನಮ್ಮ ಪರವಾಗಿ ತೀರ್ಪು ಬರುವಂತೆ ವಕೀಲರು ನಡೆಸುತ್ತಿರುವ ವಕಾಲತ್ತಿನ ಬಗ್ಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರಿಂದ ಮಾಹಿತಿ ಪಡೆದುಕೊಂಡರು. ಮರಾಠಿ ಭಾಷಿಕರ ಮೇಲೆ ಆಗುತ್ತಿರುವ ಅನ್ಯಾಯ ನಿಲ್ಲಬೇಕಿದೆ, ಅನೇಕ ವರ್ಷಗಳಿಂದ ನೀವು ನಡೆಸುತ್ತಿರುವ ಹೋರಾಟ ನಮಗೆ ಪ್ರೇರಣೆಯಾಗಿದೆ ಎಂದು ರೋಹಿತ ಪವಾರ ಹೇಳಿದರು.
ತಮಗೂ ಬೆಳಗಾವಿಗೂ ಅವಿನಾಭಾವ ಸಂಬಂಧ ಇದೆ. ತಾವು ಮಹಾರಾಷ್ಟ್ರದಿಂದ ಯಾವುದೇ ಅಡ್ಡ ದಾರಿಯಿಂದ ಬಂದಿಲ್ಲ. ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರ ಸಮಸ್ಯೆಯನ್ನು ಬಗೆ ಹರಿಸಲು ಮಹಾರಾಷ್ಟ್ರ ಸದನದಲ್ಲಿ ಚರ್ಚೆ ನಡೆಸುವೆ ಎಂದರು.
ರಾಜಕೀಯದಲ್ಲಿ ನನ್ನ ದೊಡ್ಡಪ್ಪ ಶರದ ಪವಾರ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇನೆ. ಬೆಳಗಾವಿ ಮರಾಠಿಗರ ಬೇಡಿಕೆಯ ಅನುಸಾರ ನಾನು ಇಲ್ಲಿ ಬಂದಿದ್ದು ಇವರ ಸಮಸ್ಯೆಯ ಬಗ್ಗೆ ಮಹಾರಾಷ್ಟ್ರದಲ್ಲಿ ಬೆಳಕು ಚೆಲ್ಲುವುದಾಗಿ ಹೇಳಿದರು.