ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಆಗಮಿಸಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶೆಟ್ಟರ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.
ನಂತರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಪಕ್ಷದ ಸಿದ್ದಾಂತ ಶೆಟ್ಟರಗೆ ಗೊತ್ತಿದೆ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ, ತಮ್ಮ ಸ್ವಾಭಿಮಾನ ಕಾಪಾಡಲು ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಅವರು ಗೆಲ್ಲುವ ಜೊತೆಗೆ, ಶೆಟ್ಟರ್ ಪಕ್ಷಕ್ಕೆ ಬರುವುದರಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಶಕ್ತಿ ಸಿಗಲಿದೆ ಎಂದು ಹೇಳಿದರು.
ರಾಹುಲ್ ಗಾಂಧಿಯವರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವಂತೆ ಸೂಚಿಸಿದ್ದಾರೆ. ಈಗ ಶೆಟ್ಟರ್ ಸೇರ್ಪಡೆಯಿಂದ ರಾಹುಲ್ ಗಾಂಧಿಯವರ ಆಕಾಂಕ್ಷೆ ಈಡೇರಲಿದೆ ಎಂಬುದು ನಮಗೆ ಖಾತ್ರಿಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಜಗದೀಶ್ ಶೆಟ್ಟರ್ ಅವರೊಂದಿಗೆ ಹಲವಾರು ದಶಕಗಳ ಕಾಲ ನಾವು ರಾಜ್ಯ ರಾಜಕೀಯದಲ್ಲಿದ್ದೆವು. ನಾವು ಬೇರೆ ಬೇರೆ ಪಕ್ಷದಲ್ಲಿದ್ದರೂ ವೈಯಕ್ತಿಕವಾಗಿ ನಾವು ಯಾವತ್ತೂ ಜಗಳವಾಡಿಲ್ಲ. ಅವರ ಪಕ್ಷ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲಬಂದಿದೆ’ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿ ಟಿಕೆಟ್ ನೀಡದ್ದಕ್ಕೆ ಮುನಿಸಿಕೊಂಡಿದ್ದ ಶೆಟ್ಟರ್ ಅವರು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು. ಬಿಜೆಪಿ ಹಿರಿಯ ನಾಯಕರು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಹಠ ಬಿಡಲಿಲ್ಲ. ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಬೆಂಗಳೂರಿಗೆ ಆಗಮಿಸಿದ್ದ ಶೆಟ್ಟರ್ ಅವರು ಕಾಂಗ್ರೆಸ್ ನಾಯಕರನ್ನು ತಡರಾತ್ರಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದರು.
ಬಿಜೆಪಿ ತಮ್ಮನ್ನು ಬೆಳೆಸಿದೆ ಅದಕ್ಕೆ ಪ್ರತಿಯಾಗಿ ತಾವೂ ಪಕ್ಷದ ಬೆಳವಣಿಗೆಗೆ ಶ್ರಮವಹಿಸಿರುವದಾಗಿ ತಿಳಿಸಿದ ಶೆಟ್ಟರ್ ಪಕ್ಷದ ಕೆಲವರಿಗೆ ತಾವು ಬೇಡವಾಗಿದ್ದರಿಂದ ರಾಜ್ಯದ ಸಕ್ರಿಯ ರಾಜಕೀಯದಿಂದ ದೂರವಿಡಲು ಪ್ರಯತ್ನಿಸಿ ಟಿಕೆಟ್ ದೂರೆಯದಂತೆ ನೋಡಿಕೊಂಡರು. ತಮಗೆ ಶಾಸಕ ಸ್ಥಾನ ಹೊರತು ಯಾವುದೇ ಹುದ್ದೆ ಬೇಕಿರಲಿಲ್ಲ. ಆದರೆ ಅದಕ್ಕೂ ಒಪ್ಪದರಿಂದ ಬಿಜೆಪಿ ತೊರೆದಿರುವದಾಗಿ ತಿಳಿಸಿದರು.
ಕಾಂಗ್ರೆಸ್ ಮತ್ತು ತಮ್ಮ ಮಧ್ಯೆ ಯಾವುದೇ ಶರತ್ತಿಲ್ಲವೆಂದು ಶೆಟ್ಟರ್ ತಿಳಿಸಿದರು.