ಸಮದರ್ಶಿ ವಿಶೇಷ
————————–
ಹುಬ್ಬಳ್ಳಿ : ತಾವು ಕಟ್ಟಿ ಬೆಳೆಸಿದ ಪಕ್ಷ ತಮ್ಮೊಂದಿಗೆ ವರ್ತಿಸಿದ ರೀತಿಯಿಂದ ನೊಂದು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿ ವಶದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯನ್ನು ಕಾಂಗ್ರೆಸ್ ವಶಕ್ಕೆ ಪಡೆಯುವ ಪ್ರತಿಜ್ಞೆ ಮಾಡಿದ್ದಾರೆನ್ನಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಮಹಾಪೌರ, ಉಪಮಹಾಪೌರ ಚುನಾವಣೆ ಇದೇ ಜೂನ್ 20 ರಂದು ಜರುಗಲಿದ್ದು ಇತ್ತೀಚಿಗೆ ತಮ್ಮನ್ನು ಭೆಟ್ಟಿಯಾಗಿದ್ದ ರಾಜ್ಯ ಕಾಂಗ್ರೆಸ್ ಮುಖಂಡ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಈ ಕುರಿತು ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
82 ಸಂಖ್ಯಾಬಲದ ಪಾಲಿಕೆಯಲ್ಲಿ ಬಿಜೆಪಿ ಅತೀ ಹೆಚ್ಚು ಅಂದರೆ 39 ಸದಸ್ಯರನ್ನು ಹೊಂದಿದೆ. ಆದರೆ ಬಹುಮತ ಹೊಂದಿಲ್ಲ. 42 ಮ್ಯಾಜಿಕ್ ನಂಬರ್ ಆಗಿದ್ದು, ಐವರು ಪಕ್ಷೇತರ ಮತ್ತು ಓರ್ವ ಜೆಡಿಎಸ್ ಸದಸ್ಯರ ಬೆಂಬಲದಿಂದ ಬಿಜೆಪಿ ಅಧಿಕಾರ ಪಡೆದುಕೊಂಡಿತ್ತು. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಹೊಂದಿದ್ದರಿಂದ ಪಕ್ಷೇತರರು, ಜೆಡಿಎಸ್ ತಮಗೆ ಅನುಕೂಲವಾಗಬಹುದೆಂದು ಬೆಂಬಲ ನೀಡಿದ್ದರು.
ಆದರೆ, ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಐದು ಪಕ್ಷೇತರರು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬೆಂಬಲಕೊಡುವ ಸಾಧ್ಯತೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶೆಟ್ಟರ್ ಈಗ ಬಿಜೆಪಿಯಲ್ಲಿಲ್ಲ. ಶೆಟ್ಟರ್ ಹೇಳುವಂತೆ ಅವರಿಗೆ ಪಾಲಿಕೆಯಲ್ಲಿ 11 ಅಪ್ಪಟ ಬೆಂಬಲಿಗ ಸದಸ್ಯರಿದ್ದು ಅವರೆಲ್ಲ ಕಾಂಗ್ರೆಸ್ ಗೆ ಮತ ಹಾಕಲಿದ್ದಾರೆ. ಹಾಗಾಗಿ ಪಾಲಿಕೆ ಬಿಜೆಪಿಯ ಕೈ ತಪ್ಪುವ ಸಾಧ್ಯತೆಯಿದೆ.
ಬಿಜೆಪಿ ಹೊರತು ಪಡೆಸಿ ಪಾಲಿಕೆಯಲ್ಲಿ ಕಾಂಗ್ರೆಸ್ 33, ಆರು ಪಕ್ಷೇತರರು, ಮೂವರು ಎಐಎಂಐಎಂ ಹಾಗು ಜೆಡಿಎಸ್ ನ ಓರ್ವ ಸದಸ್ಯರಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿಯೂ ಕ್ಷೇತ್ರದ ಹೊಂದಿರುವ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಮಹಾಪೌರ, ಉಪಮಹಾಪೌರ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.
ಶೆಟ್ಟರ್ ಸೋಲಿನಿಂದ ಬಿಜೆಪಿ ಒಂದು ಮತ ಕಳೆದುಕೊಂಡು 38ಕ್ಕಿಳಿದಿದ್ದರೆ, ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಗೆದ್ದಿರುವ ವಿನಯ ಕುಲಕರ್ಣಿಯವರಿಂದ ಕಾಂಗ್ರೆಸ್ ಒಂದು ಮತ ಹೆಚ್ಚಿಗೆಯಾಗಿದೆ. ಇದರೊಂದಿಗೆ ಶೆಟ್ಟರ್ ಅವರ ಬೆಂಬಲಿಗರಲ್ಲಿ 8 ಮತಗಳು ಬಂದರೆ ಕಾಂಗ್ರೆಸ್ ಮ್ಯಾಜಿಕ್ ಫಿಗರ್ 42 ತಲುಪಲಿದೆ. ಪಕ್ಷೇತರರೂ ಮತ ನೀಡಿದರೆ ಅದು ಹೆಚ್ಚಿನ ಲೀಡ್ ಆಗಲಿದೆ. ಶೆಟ್ಟರ್ ಬೆಂಬಲಿಗ 11 ಸದಸ್ಯರು ಕಾಂಗ್ರೆಸ್ ಗೆ ಮತ ನೀಡದಿದ್ದರೂ ಚುನಾವಣೆಯಲ್ಲಿ ಗೈರು ಉಳಿದರೂ ಕಾಂಗ್ರೆಸ್ ವಶಕ್ಕೆ ಪಾಲಿಕೆ ಬರುವುದು ನಿಶ್ಚಯ.
ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರಲ್ಲಿ ಶೆಟ್ಟರ್ ಸಹ ಒಬ್ಬರು, ಅನೇಕ ಬಾರಿ ವಿಧಾನಸಭೆ ಸದಸ್ಯರಾಗಿದ್ದ ತಮನ್ನು ಕೊನೆಯಲ್ಲಿ ಅವಮಾನಕರ ರೀತಿಯಲ್ಲಿ ನಡೆಸಿಕೊಂಡ ಬಿಜೆಪಿಯಿಂದ ಅಧಿಕಾರ ಕಸಿದು ಕಾಂಗ್ರೆಸ್ ಗೆ ನೀಡುವ ಪ್ರತಿಜ್ಞೆಯನ್ನು ಶೆಟ್ಟರ್ ಮಾಡಿದ್ದಾರೆ. ಉತ್ತರ ಕರ್ನಾಟಕದ ಬಿಜೆಪಿಯಲ್ಲಿಯ ಪ್ರಮುಖ ನಾಯಕರಾಗಿದ್ದ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿಯವರಿಗೆ ಚುನಾವಣೆಯಲ್ಲಿ ಸ್ಪರ್ಧೆಸಲು ಟಿಕೆಟ್ ನೀಡದೇ ಅವರಾಗಿಯೇ ಪಕ್ಷ ಬಿಡುವಂತೆ ಮಾಡುವಲ್ಲಿ ಬಿಜೆಪಿ ರಾಷ್ಟೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯಶಸ್ವಿಯಾಗಿದ್ದರೆನ್ನಲಾಗಿದೆ.
ಪಾಲಿಕೆ ಅಧಿಕಾರ ಬಿಜೆಪಿಗೆ ತಪ್ಪಿ ಹೋದರೆ ಅದರ ಹೊಣೆ ಜೋಶಿಯವರದೇ ಆಗುತ್ತದೆ. ಲೋಕಸಭೆಯಲ್ಲಿ ಹುಬ್ಬಳ್ಳಿಯನ್ನು ಪ್ರತಿನಿಧಿಸುವ ಅವರು ತಮ್ಮ ತವರಲ್ಲೇ ಪಾಲಿಕೆಯನ್ನು ಅಧಿಕಾರದಲ್ಲಿಟ್ಟುಕೊಳ್ಳಲು ಆಗದಿರುವ ಆರೋಪ ಹೊರಲಿದ್ದಾರೆ. ಈ ಬೆಳವಣಿಗೆ ಅವರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಭಾವ ಬೀರುವ ಸಾಧ್ಯತೆಯಿದೆ.